ಹಾಸನ: ನಗರದ ಬಿಎಂ ರಸ್ತೆಯಲ್ಲಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಕಳಪೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಹಾಸನ ಜಿಲ್ಲಾ ಅಂಕಿತಾಧಿಕಾರಿ ಡಾ. ಶಶಿಧರ್ ಹಾಗೂ ಹಾಸನ ತಾಲ್ಲೂಕು ಆರೋಗ್ಯ ಸುರಕ್ಷತಾ ಅಧಿಕಾರಿ ಡಾ. ವಿಜಯ್‌ಗೊರೂರು ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಕೊಳೆತ ಸೇಬೆಹಣ್ಣು, ಈರುಳ್ಳಿ, ಹೂಕೋಸು, ಕೊಬ್ಬರಿ ಹಾಗೂ ಅವಧಿ ಮೀರಿದ ಪರೋಟ ಪತ್ತೆಯಾಗಿದೆ. ಕೆಲ ಆಹಾರ ಪದಾರ್ಥಗಳನ್ನು ಪರಿಶೀಲನೆಗಾಗಿ ಕೊಂಡೊಯ್ಯಲಾಯಿತು.
ನಂತರ ಮಾತನಾಡಿದ ಜಿಲ್ಲಾ ಅಂಕಿತ ಅಧಿಕಾರಿ ಡಾಕ್ಟರ್ ಶಶಿಧರ್ ಅವರು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಇಂದು ಇಲ್ಲಿಗೆ ಬಂದು ಪರಿಶೀಲನೆ ನಡೆಸಲಾಗಿದೆ ಇಲ್ಲಿ ಸಾಕಷ್ಟು ಪದಾರ್ಥಗಳು ಅವಧಿ ಮೀರಿದ್ದಾಗಿದ್ದು ಮತ್ತು ಇನ್ನು ಕೆಲ ಪದಾರ್ಥಗಳು ಕೊಳೆತಿದ್ದು ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಇಲ್ಲಿಯ ಕೆಲ ಸಿಬ್ಬಂದಿಗಳ ನಿರ್ಲಕ್ಷದಿಂದ ಈ ರೀತಿ ಆಗಿರುವುದು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ರಿಲಯನ್ಸ್ ಸ್ಮಾರ್ಟ್ ಬಜಾರ್‌ಗೆ ನೋಟಿಸ್ ನೀಡಲಾಗಿದ್ದು. ಇನ್ನೂ ಮೂರು ದಿನಗಳೊಳಗೆ ಲೀಗಲ್ ನೋಟಿಸ್ ಜಾರಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರ ಆರೋಗ್ಯದೊಂದಿಗೆ ಆಟವಾಡುತ್ತಿರುವ ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
