ಹಾಸನ : ನಗರದ ಎಂ.ಜಿ. ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಗರದಲ್ಲೆ ಪ್ರಪ್ರಥಮ ಹಾಗೂ ಅತಿದೊಡ್ಡ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ. ಜನವರಿ ೨೫ ಮತ್ತು ೨೬ ರಂದು ಬೆಳಗ್ಗೆ ೧೦ ರಿಂದ ರಾತ್ರಿ ೯ ಗಂಟೆವರೆಗೆ ಎರಡು ದಿನಗಳ ಶೈಕ್ಷಣಿಕ ಜಾತ್ರೆ ನಡೆಯಲಿದೆ ಎಂದು ಜನಮಿತ್ರ ಪ್ರಧಾನ ಸಂಪಾದಕ ಹೆಚ್.ಬಿ. ಮದನಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಡು ಹಳೆಯದಾದರೇನು ಭಾವ ನವ ನವೀನ ಅನ್ನೋ ಹಾಗೆ, ೧೯೬೨ ರಲ್ಲಿ ಮಾಧ್ಯಮ ಲೊಕಕ್ಕೆ ಅಡಿಯಿಟ್ಟ ಜನಮಿತ್ರ ಪತ್ರಿಕೆ ಅಂದಿನಿಂದ ಇಂದಿನವರೆಗೂ ಎಲ್ಲದರಲ್ಲೂ ಹೊಸತನ, ವಿಭಿನ್ನತೆಗೆ ಮುಖವಾಣಿಯಾಗಿ ಜನಮನ ಗೆದ್ದಿದೆ. ಇದೀಗ ಹಾಸನದಲ್ಲೇ ಪ್ರಪ್ರಥಮ ಹಾಗೂ ಅತಿದೊಡ್ಡ ಎಜುಕೇಶನ್ ಎಕ್ಸ್ ಪೋ ಆಯೋಜಿಸಿದೆ. ಜನವರಿ ೨೫ ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಪದ್ಮಶ್ರೀ ಪುರಸ್ಕೃತ ಶಿಕ್ಷಣ ಸಂತ, ಹರೆಕಳ ಹಾಜಬ್ಬ ಅವರು ಶಿಕ್ಷಣ ಜಾತ್ರೆಗೆ ಶುಭ ಚಾಲನೆ ನೀಡಲಿದ್ದಾರೆ. ಈ ಕ್ಷಣಕ್ಕೆ ಹಲವು ಮಹನೀಯರು ಸಾಕ್ಷಿಯಾಗಲಿದ್ದಾರೆ ಎಂದರು. ಹಾಸನ ಜೊತೆಗೆ ಪಠ್ಯ ಮತ್ತು ಪಠ್ಯೇತರ ಶಿಕ್ಷಣಕ್ಕೆ ಸಂಬಂಧಿಸಿದ ರಾಜ್ಯದ ವಿವಿಧೆಡೆಗಳಿಂದ ಪ್ರತಿಷ್ಠಿತ ೫೦ಕ್ಕೂ ಹೆಚ್ಚು ಶೈಕ್ಷಣಿಕ ಮಳಿಗೆಗಳು ಒಂದೇ ಸೂರಿನಡಿ ಜಮಾವಣೆಗೊಳ್ಳಲಿವೆ. ಇಂಥದೊಂದು ಅಪರೂಪದ ವೇದಿಕೆಯನ್ನು ನಿಮ್ಮ ಜನಮಿತ್ರ ಕಲ್ಪಿಸಿಕೊಟ್ಟಿದೆ. ಮಕ್ಕಳ ಬಗ್ಗೆ ಅಪಾರ ಆಸೆ- ಆಕಾಂಕ್ಷೆ ಇಟ್ಟುಕೊಂಡಿರುವ ಹೆತ್ತವರು, ಕನಸು ಕಾಣುತ್ತಿರುವ ಮಕ್ಕಳು, ಹೆಸರಾಂತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಯವರೊಂದಿಗೆ ನೇರ ಮತ್ತು ಮುಕ್ತವಾಗಿ ಮಾತನಾಡಬಹುದು. ಮಕ್ಕಳ ಭವಿಷ್ಯದ ಓದು, ಅವರನ್ನು ಸರ್ವ ರೀತಿಯಲ್ಲಿ ಪರಿಪೂರ್ಣ ಗೊಳಿಸುವ, ಅಣಿಗೊಳಿಸುವ ಸಲಹೆ ಮಾರ್ಗದರ್ಶನ ಜನಮಿತ್ರ ಎಜುಕೇಶನ್ ಮೇಳದಲ್ಲಿ ಸಿಗಲಿದೆ ಎಂದರು. ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ನುರಿತ ಪರಿಣಿತರು ಭಾಗಿಯಾಗಿ ಪೂರಕ ಸಲಹೆ ಸೂಚನೆ ನೀಡಲಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಇಷ್ಟದ ಸ್ಕೂಲು ಕಾಲೇಜುಗಳ ಜೊತೆಗೆ ನೇರವಾಗಿ ಮಾತನಾಡಿ ಮಾಹಿತಿ ಪಡೆದುಕೊಳ್ಳಬಹುದು. ಪಠ್ಯಕ್ರಮ ಪ್ರವೇಶ ಪ್ರಕ್ರಿಯೆ, ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ಪಡೆಯಬಹುದು ಮಕ್ಕಳ ಭವಿಷ್ಯ ರೂಪಿಸಲು ಯೋಚಿಸಿ ಹೆಜ್ಜೆ ಇಡಲು ಇದೊಂದು ಸುವರ್ಣಾವಕಾಶವಾಗಿದೆಂದು ತಿಳಿಸಿದರು.
ಜಾಬ್ ಮೇಳ: ಶಿಕ್ಷಣ ಮಾರ್ಗದರ್ಶನ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಲು ಟೀಚರ್ ನಿಂದ ಹಿಡಿದು ಬಸ್ ಡ್ರೈವರ್ ವರೆಗೆ, ಅಕೌಂಟೆಂಟ್ ನಿಂದ ಹಿಡಿದು ಆಯಾದ ವರೆಗೆ ಬೃಹತ್ ಜಾಬ್ ಮೇಳ ಆಯೋಜಿಸಲಾಗಿದೆ. ಜನವರಿ ೨೫ ರಂದು ಮಧ್ಯಾಹ್ನ ೧೨ ರಿಂದ ೧ ಗಂಟೆವರೆಗೆ ಕೌಶಲ್ಯ ತಜ್ಞ ರಾದ ಡಾ.ಚೇತನ್ ರಾಮ್ ಅವರಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ ೨ ರಿಂದ ಸಂಜೆ ೪ ಗಂಟೆವರೆಗೆ ಹ್ಯಾಂಡ್ ರೈಟಿಂಗ್ ಕಾರ್ಯಾಗಾರ ಮತ್ತು ವಿಶ್ಲೇಷಣೆ ಸತ್ಯ ಅವರಿಂದ. ನಿಮ್ಮ ಹ್ಯಾಂಡ್ ರೈಟಿಂಗ್ ನಿಂದ ನಿಮ್ಮ ಸ್ವಭಾವ, ಗುಣ, ನಡತೆ, ಸ್ವಭಾವವನ್ನು ಸತ್ಯ ಅವರು ತಿಳಿಸಿಕೊಡಲಿದ್ದಾರೆ. ಸಂಜೆ ೪ ರಿಂದ ೫ ಶ್ಲೋಕ ಪಠಣ ಸ್ಪರ್ಧೆ ಏರ್ಪಡಿಸಲಾಗಿದೆ. ಶ್ಲೋಕ ಹೇಳಿ ಬಹುಮಾನ ಗೆಲ್ಲಬಹುದಾಗಿದೆ. ಸಂಜೆ ೫ ರಿಂದ ೬ ರ ವರೆಗೆ ಮಣ್ಣಿನ ಕಲೆ ಕಾರ್ಯಾಗಾರವನ್ನು ಶ್ಯಾಂ ಸುಂದರ್ ನಡೆಸಿಕೊಡಲಿದ್ದಾರೆ. ಸಂಜೆ ೫.೩೦ ರಿಂದ ೭.೩೦ ರವರೆಗೆ ಕದಂಬ ಚೆಸ್ ಅಕಾಡೆಮಿ ವತಿಯಿಂದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ ೬.೩೦ ರಾತ್ರಿ ೮ ರ ವರೆಗೆ ವಿ೩ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಕಂಪನಿ ಹಾಸನ ಇವರಿಂದ ಇತ್ತೀಚಿನ ಸಮಕಾಲೀನ ಡ್ಯಾನ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎರಡನೇ ದಿನ ಜ.೨೬ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಕದಂಬ ಚೆಸ್ ಅಕಾಡೆಮಿ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಚೆಸ್ ಸರ್ಧೆ ಏರ್ಪಡಿಸಲಾಗಿದೆ. ಬೆಳಗ್ಗೆ ೧೧ ರಿಂದ ಸಂಜೆ ೫ ರವರೆಗೆ ಜಾಬ್ ಮೇಳ ನಡೆಯಲಿದೆ. ಮಧ್ಯಾಹ್ನ ೧೨ ರಿಂದ ೧ ರವರೆಗೆ ಪ್ರೀತಿ ಮನು ಅವರಿಂದ ಟಾಕ್ ಆನ್ ಸ್ಕಿಲ್ ಫುಲ್ ಕೌಶಲ್ಯ ಪೂರ್ಣ ಪೋಷಕತ್ವದ ಬಗ್ಗೆ ವಿಶೇಷ ಉಪನ್ಯಾಸ, ಮಧ್ಯಾಹ್ನ ೨ ರಿಂದ ಸಂಜೆ ೪.೩೦ ಕಾನ್ವಾಸ್ ಸ್ಟೋರೀಸ್ ಅವರಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ೧-೩, ೪-೬ ಮತ್ತು ೭-೧೦ ನೇ ತರಗತಿ ಮಕ್ಕಳು ಭಾಗಿಯಾಗಬಹುದು. ಮಧ್ಯಾಹ್ನ ೨ ರಿಂದ ಸಂಜೆ ೪ ಶಿಕ್ಷಣ ತಜ್ಞ ಡಾ.ಅನಂತ ಪ್ರಭು ಜಿ. ಅವರಿಂದ ಟೆಕ್ನಾಲಜಿ ಆನ್ ಲರ್ನಿಂಗ್ ಟೂಲ್ ವಿಷಯ ಕುರಿತು ಸೆಮಿನಾರ್ ಇರಲಿದೆ ಎಂದು ಹೇಳಿದರು.
ಸಂಜೆ ೫ ರಿಂದ ೬.೩೦ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆಯಲಿದ್ದು, ೩-೪, ೫-೭ ಹಾಗೂ ೮-೧೦ ವರ್ಷದ ಮಕ್ಕಳು ಭಾಗಿಯಾಗಬಹುದು. ಸಂಜೆ ೬.೩೦ ರಿಂದ ರಾತ್ರಿ ೮ ಪೋಷಕರು ಹಾಗೂ ಮಕ್ಕಳಿಂದ ತಮ್ಮ ತಮ್ಮ ಟ್ಯಾಲೆಂಟ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇರುವ ಅಭಿರುಚಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಶೈಕ್ಷಣಿಕ ಮಾಹಿತಿ, ಮಾರ್ಗದರ್ಶನ ಜೊತೆಗೆ ಚರ್ಚೆ, ವಿಚಾರ ವಿನಿಮಯ, ಜಾಬ್ ಮೇಳ, ಚಿತ್ರಕಲಾ ಸ್ಪರ್ಧೆ, ಪೋಷಕರಿಗಾಗಿ ಟ್ಯಾಲೆಂಟ್ ಶೋ ಸ್ಪರ್ಧೆ ಹಾಡು ಜೋಕು ಮ್ಯಾಜಿಕ್ ಇತ್ಯಾದಿ ಮನರಂಜನಾ ಕಾರ್ಯಕ್ರಮ ಇದ್ದು, ಹೊಸ ಅನುಭವ ಸಿಗಲಿದೆ. ಎಲ್ಲದಕ್ಕೂ ಪ್ರವೇಶ ಉಚಿತ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ಸಂಪಾದಕ ಸಿ.ಆರ್. ನವೀನ್, ಜಾಹೀರಾತು ವಿಭಾಗದ ವ್ಯವಸ್ಥಾಪಕ ಅಭಿಜಿತ್ ಇದ್ದರು.
