ಹಾಸನ : ನಗರದ ಸಾಲಗಾಮೆ ರಸ್ತೆ ಬಳಿ ಇರುವ ಕಲಾ ಕಾಲೇಜು ಮೈದಾನದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ಗತವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.
ನಗರದಲ್ಲಿ ದೊಡ್ಡಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಎಸ್.ಡಿ.ಎಂ ಕಾಲೇಜು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜತೆಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ವೈಭವವನ್ನು ವಿದ್ಯಾರ್ಥಿಗಳ ಮೂಲಕ ಅನಾವರಣಗೊಳಿಸುವ ಕೆಲಸ ಮಾಡುತ್ತಿದೆ. ದೇಸಿ ಸೊಗಡಿನ ಕಲೆಯನ್ನು ಉಳಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ೩೫೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ಆಳ್ವ ಅವರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ವೈಭವದಲ್ಲಿ ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ, ಬಡಗತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡಾನ್ಸ್, ಶಾಸ್ತ್ರಿಯ ನೃತ್ಯ, ಗುಜರಾತಿನ ಗಾರ್ಭ ಮತ್ತು ದಾಂಡಿಯಾ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಡೊಳ್ಳು ಕುಣಿತ, ಕಥಕ್ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಪುರಲಿಯಾ ಇತರೆ ನೃತ್ಯ ಪ್ರಕಾರಗಳು ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ನಿಂತು ಹೋಗಿರುವ ಹೊಯ್ಸಳ ಉತ್ಸವವನ್ನು ಮತ್ತೆ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿ ಗಮನಸೆಳೆದು ಮತ್ತೆ ಪುನರಾಂಭಿಸುವ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಸನಾಂಬ ಕಲಾಕ್ಷೇತ್ರಕ್ಕೆ ಹೆಚ್ಚಿನ ಅಭಿವೃದ್ಧಿಗೆ ೨ ಕೋಟಿ ನೆರವು ಕೇಳಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಟರ್ಫ್ ಮೈದಾನ ನಿರ್ಮಾಣಕ್ಕೂ ಹಣಕಾಸಿನ ನೆರವು ಕೇಳಲಾಗಿದೆ ಎಂದರು. ಕೇಂದ್ರ ಬಜೆಟ್ ನಮಗೆ ತೃಪ್ತಿ ನೀಡಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸುವ ಬಗ್ಗೆ ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪಾರ್ಕ್ ಅಭಿವೃದ್ಧಿ, ಸತ್ಯಮಂಗಲ ಬಡಾವಣೆಗೆ ಹೇಮಾವತಿ ನೀರು ಕೊಡುವ ಕಾಮಗಾರಿ ನಡೆಯುತ್ತಿದೆ. ನಗರಸಭೆಯಿಂದ ಸುಮಾರು ೩೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಒಳ ಚರಂಡಿ ಇತ್ಯಾದಿ ಕಾಮಗಾರಿ ಕೈಗೊಳ್ಳಲು ಇಂದಿನಿಂದಲೇ ಟೆಂಡರ್ ಕರೆಯುವ ಪ್ರಕ್ರಿಯೆ ಶುರುವಾಗಬೇಕಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ಜೆಡಿಎಸ್ ಮುಖಂಡ ಶಿವಣ್ಣ ಇತರರು ಉಪಸ್ಥಿತರಿದ್ದರು.
