ನವದೆಹಲಿ : ನಾಳೆ(ಫೆ.೦೧) ಕೇಂದ್ರ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ತಯಾರಿ ಒಂದು ಮಹತ್ವದ ಜವಾಬ್ದಾರಿ. ನುರಿತ ಅಧಿಕಾರಿಗಳು ಈ ಕಾರ್ಯದಲ್ಲಿ ಐದಾರು ತಿಂಗಳಿಂದ ತೊಡಗಿಸಿಕೊಳ್ಳುತ್ತಾರೆ. ಬಜೆಟ್ ಪ್ರತಿಗಳು ಮುದ್ರಣಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಹಲವು ಹಂತದ ಪೂರ್ವ ತಯಾರಿ, ವಿಶೇಷ ಕಾರ್ಯಕ್ರಮಗಳು ಕೂಡಾ ನಡೆಯುತ್ತದೆ.
ಅಂಥ ವಿಶೇಷ ಕಾರ್ಯಕ್ರಮದಲ್ಲಿ ಹಲ್ವಾ ಕಾರ್ಯಕ್ರಮ ಕೂಡಾ ಒಂದು. ಖುದ್ದು ಹಣಕಾಸು ಸಚಿವರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಜೆಟ್ ತಂಡದ ಸದಸ್ಯರಿಗೆ ಹಲ್ವಾ ತಿನ್ನಿಸುತ್ತಾರೆ. ಹಲವು ವರ್ಷಗಳಿಂದ ಈ ಸಂಪ್ರದಾಯ ರೂಢಿಯಲ್ಲಿದೆ.
ವಿವಿಧ ಇಲಾಖೆ, ವಿವಿಧ ಸಚಿವಾಲಯ, ವಿವಿಧ ಉದ್ಯಮ, ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳು ಸೇರಿದಂತೆ ವಿವಿಧ ವರ್ಗದ ಮಂದಿಯನ್ನು ಸಂಪರ್ಕಿಸಿ ವಾರ್ಷಿಕ ಬಜೆಟ್ ಅನ್ನು ಅಧಿಕಾರಿಗಳು ಸಿದ್ಧಪಡಿಸಿರುತ್ತಾರೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳಿಗೆ ಧನ್ಯವಾದ ಹೇಳುವುದಕ್ಕಾಗಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.
ಹಲ್ವಾ ಕಾರ್ಯಕ್ರಮದ ಬಳಿಕ ಒಂದು ಮಹತ್ವದ ಬೆಳವಣಿಗೆ ಆಗುತ್ತದೆ. ಅದೇನೆಂದರೆ ಬಜೆಟ್ ತಯಾರಿ ಮಾಡಿದ ಅಧಿಕಾರಿಗಳು, ಸಿಬ್ಬಂದಿ ಒಳಗೆ ಲಾಕ್ ಆಗುತ್ತಾರೆ..! ಅಂದ್ರೆ ಹೊರ ಜಗತ್ತಿನ ಸಂಪರ್ಕಕ್ಕೆ ಅವರು ಸಿಗೋದಿಲ್ಲ. ಬಜೆಟ್ ಮಂಡನೆ ಆಗುವವರೆಗೆ ಅವರನ್ನು ಪ್ರತ್ಯೇಕವಾಗಿಡಲಾಗುತ್ತದೆ. ಕಾರಣ ಏನಂದ್ರೆ ಬಜೆಟ್ ಮಾಹಿತಿ ಸೋರಿಕೆ ಆಗಬಾರದು ಎನ್ನುವ ಕಾರಣಕ್ಕೆ. ಬಜೆಟ್ ಮಂಡನೆ ಆಗುವವರೆಗೆ ಸಂಸತ್ತಿನ ನಾರ್ತ್ ಬ್ಲಾಕ್ನಲ್ಲಿ ಅವರ ವಾಸ. ಮೊಬೈಲ್ ಫೋನ್ ಕೂಡಾ ಅವರು ಬಳಸುವಂತಿಲ್ಲ.
ಅಧಿಕಾರಿಗಳು ಬಜೆಟ್ ತಯಾರಿಸಿದ ಬಳಿಕ ಹಣಕಾಸು ಸಚಿವರು ಅದನ್ನು ನೋಡುತ್ತಾರೆ. ಅದಾದ ಮೇಲೆ ಅದನ್ನು ಪ್ರಧಾನಿ ಅನುಮೋದನೆಗೆ ಕಳುಹಿಸಲಾಗುತ್ತದೆ. ಅನುಮೋದನೆ ಸಿಕ್ಕ ನಂತರವಷ್ಟೇ ಬಜೆಟ್ ಮುದ್ರಣಕ್ಕೆ ತೆರಳುತ್ತದೆ.