ಹಾಸನ : ಖಾಸಗೀ ಬಸ್ ಅನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಲಾಂಗ್‌ನಿಂದ ಮುಂಭಾಗದ ಗಾಜನ್ನು ಒಡೆದು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣ ಹಾಸನದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲು ಮುಂದಾದ ವೇಳೆ ಪೊಲೀಸರ ವಿರುದ್ಧವೇ ಆರೋಪಿ ತಿರುಗಿ ಬಿದ್ದಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾಡಿಸಿ ವಶಕ್ಕೆ ಪಡೆದ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ.
ಮೂಲತ: ಹೊಳೆತಿಮ್ಮನಹಳ್ಳಿ ನಿವಾಸಿ, ಹಾಲಿ ಹಾಸನ ವಿದ್ಯಾನಗರದಲ್ಲಿ ವಾಸವಿರುವ ಮನೋಜ್ ಜಿ. ಗೌಡ(೨೩) ಬಂಧಿತ ಆರೋಪಿ. ಜನವರಿ ೨೮ ನಸುಕಿನ ಜಾವ ೨ ಗಂಟೆ ಸಮಯದಲ್ಲಿ ಗಾಂಜಾ ಮತ್ತಿನಲ್ಲಿ ಬೆಂಗಳೂರು -ಮಂಗಳೂರು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದ. ಅಷ್ಟೇ ಸಾಲದೆಂಬಂತೆ ಲಾಂಗ್‌ನಿಂದ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದ. ಬಸ್ ಚಾಲಕನ ಸೀಟ್ ಡೋರ್ ತೆರೆಯದ ಕಾರಣ ಬಸ್ ಮುಂಭಾಗದ ಗಾಜು ಒಡೆದು ಹಾಕಿದ್ದ.
ಈ ಘಟನೆ ದೇವರಾಯಪಟ್ಟಣ ಬಳಿ ನಡೆದಿತ್ತು. ಉಡುಪಿ ಜಿಲ್ಲೆ ಥರಸಿ ಗ್ರಾಮದ ಬಸ್ ಚಾಲಕ ಅರುಣ್ ಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಲು ಪ್ರಯತ್ನ ಮಾಡಿದ್ದ. ಬೆಂಗಳೂರಿನಿಂದ ಕುಂದಾಪುರಕ್ಕೆ ವಾಪಾಸ್ಸಾಗುತ್ತಿದ್ದಾಗ ತಣ್ಣೀರುಹಳ್ಳದಿಂದ ಹಿಂದಿನಿಂದ ಬಂದ ಸ್ವಿಫ್ಟ್ ಕಾರು ಚಾಲಕ ಓವರ್‌ಟೇಕ್ ಮಾಡಿ ದೇವರಾಯಪಟ್ಟಣ ಬಳಿ ಬಸ್‌ಗೆ ಅಡ್ಡಲಾಗಿ ಕಾರ್ ನಿಲ್ಲಿಸಿದ್ದ. ಬಳಿಕ ಮಚ್ಚಿನೊಂದಿಗೆ ಕಾರಿನಿಂದ ಇಳಿದು ಚಾಲಕನ ಬಳಿಗೆ ಬಂದು ಮಚ್ಚು ಬೀಸಿದ್ದ. ಚಾಲಕ ತಪ್ಪಿಸಿಕೊಂಡಿದ್ದರಿಂದ ಮುಂಭಾಗದ ಗಾಜನ್ನು ಮಚ್ಚಿನಿಂದ ಬೀಸಿ ಒಡೆದು ಹಾಕಿದ್ದ.
ಈ ದೃಶ್ಯವನ್ನು ಬಸ್ ನಿರ್ವಾಹಕ ವಿಡಿಯೋ ಮಾಡಿಕೊಳ್ಳುತ್ತಿದ್ದುದನ್ನು ಕಂಡು ಕಾರು ಹತ್ತಿ ಎಸ್ಕೇಪ್ ಆಗಿದ್ದ. ಈ ಸಂಬಂಧ ನಿನ್ನೆ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಬಳಿಕ ಬೆಂಗಳೂರಿಗೆ ತೆರಳಿ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಆತನನ್ನು ವಶಕ್ಕೆ ಪಡೆದ ಪೊಲೀಸರು ವಾಪಸ್ ಕರೆತರುವಾಗ ಶಾಂತಿಗ್ರಾಮ ಬಳಿ ಮೂತ್ರ ವಿಸರ್ಜನೆಗಾಗಿ ಜೀಪ್ ನಿಲ್ಲಿಸುವಂತೆ ಹೇಳಿದ್ದಾನೆ. ಜೀಪ್‌ನಿಂದ ಇಳಿದು ಜೊತೆಗಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮೋಹನ್ ಕೃಷ್ಣ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಬಳಿಕ ವಶಕ್ಕೆ ಪಡೆದಿದ್ದಾರೆ.
ಗಾಯಾಳು ಮನೋಜ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಕಾನ್‌ಸ್ಟೆಬಲ್ ಲೋಕೇಶ್ ಅವರನ್ನು ನಗರದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಂಗ್ ಹಿಡಿದು ಯುವಕನ ಅಟ್ಟಹಾಸ – ಪೊಲೀಸರ ಮೇಲೆ ತಿರುಗಿ ಬಿದ್ದವನ ಕಾಲಿಗೆ ಬಿತ್ತು ಗುಂಡೇಟು..!
RELATED ARTICLES