ಚಿಕ್ಕಮಗಳೂರು : ತಿಂಗಳ ಹಿಂದಷ್ಟೇ ನಡೆದಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ನಕ್ಸಲೀಯರ ಶರಣಾಗತಿ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಇದೀಗ ಅದಕ್ಕೆ ವೇದಿಕೆ ಸಿದ್ಧವಾಗಿದೆ. ನಾಲ್ಕಕ್ಕೂ ಹೆಚ್ಚು ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಲಿದ್ದಾರೆ.
ನಕ್ಸಲೀಯರು ತಮ್ಮ ಹೋರಾಟವನ್ನು ಕಾನೂನಾತ್ಮಕವಾಗಿ ಮುಂದುವರೆಸಬೇಕು. ಅದು ಬಿಟ್ಟು ಭಯ ಹುಟ್ಟಿಸುವ ಮೂಲಕವಲ್ಲ. ಅವರು ಮುಖ್ಯವಾಹಿನಿಗೆ ಬರೋದಾದ್ರೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಸರ್ಕಾರವೇ ಹೇಳಿತ್ತು. ಇದಾದ ಬಳಿಕ ಮಾಜಿ ನಕ್ಸಲ್ ನಾಯಕರು ಪಶ್ಚಿಮಘಟ್ಟ ಶ್ರೇಣಿಯಲ್ಲಿದ್ದ ಕೆಲ ನಕ್ಸಲೀಯರ ಜೊತೆಗೆ ಚರ್ಚಿಸಿ ಅವರನ್ನು ಶರಣಾಗತಿಗೆ ಮನವೊಲಿಸಿದ್ದಾರೆ ಎನ್ನಲಾಗಿದೆ. ಇದರ ಫಲವಾಗಿ ಜನವರಿ 08ರಂದು ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಲಿದ್ದಾರೆ.
ನಕ್ಸಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮುಂಡಗಾರು ಲತಾ, ವನಜಾಕ್ಷಿ, ಸುಂದರಿಣ ಮಾರೆಪ್ಪ, ವಸಂತ, ಜೀಶ್ ಇವರಿಷ್ಟು ಜನ ಮಾಜಿ ನಕ್ಸಲ್ ನೂರ್ ಶ್ರೀಧರ್ ನೇತೃತ್ವದಲ್ಲಿ ಸರ್ಕಾರದ ಮುಂದೆ ಶರಣಾಗಲಿದ್ದಾರೆ. ಈಗಾಗಲೇ ಈ ವಿಚಾರದಲ್ಲಿ ರಾಜ್ಯಮಟ್ಟದಲ್ಲಿ ಬಿರುಸಿನ ಪ್ರಕ್ರಿಯೆಗಳು ಆಗುತ್ತಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸುತ್ತಿದ್ದಾರೆಂದು ತಿಳಿದುಬಂದಿದೆ.
ನಕ್ಸಲ್ ಶರಣಾಗತಿ ಪ್ರಕ್ರಿಯೆ 2023ರಿಂದಲೇ ಶುರುವಾಗಿತ್ತು. ಆದರೆ ಇದಕ್ಕೆ ವೇಗ ಸಿಕ್ಕಿದ್ದು ತಿಂಗಳ ಹಿಂದೆ ನಡೆದ ವಿಕ್ರಂ ಗೌಡ ಎನ್‌ಕೌಂಟರ್ ಬಳಿ. ಸರ್ಕಾರ ರಚಿಸಿದ ಸಮನ್ವಯ ಸಮಿತಿ ಸದಸ್ಯರು ನಕ್ಸಲರ ಜೊತೆಗೆ ಮಾತುಕತೆ ನಡೆಸಿದ್ದು, ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದಾರೆ.


