Tuesday, August 11, 2026
Homeಜಿಲ್ಲಾಸುದ್ದಿವಿಶ್ವಮಾನವ ಸಂದೇಶ ಮತ್ತು ಜಾತ್ಯತೀತ ಮೌಲ್ಯಗಳಿಂದ ಐದು ತಲೆಮಾರುಗಳನ್ನು ಪ್ರಭಾವಿಸಿದ ರಾಷ್ಟ್ರಕವಿ ಕುವೆಂಪು - ಕೆ.ವಿ....

ವಿಶ್ವಮಾನವ ಸಂದೇಶ ಮತ್ತು ಜಾತ್ಯತೀತ ಮೌಲ್ಯಗಳಿಂದ ಐದು ತಲೆಮಾರುಗಳನ್ನು ಪ್ರಭಾವಿಸಿದ ರಾಷ್ಟ್ರಕವಿ ಕುವೆಂಪು – ಕೆ.ವಿ. ಪ್ರಭಾಕರ್..!‌

Telegram Group
Join Now

ಸಕಲೇಶಪುರ : ಐದು ತಲೆಮಾರುಗಳಿಂದ ಕುವೆಂಪು ಅವರ ಜಾತ್ಯತೀತ ಮೌಲ್ಯಗಳು ಸಮಾಜವನ್ನು ತಿದ್ದುತ್ತಲೇ, ಪ್ರಭಾವಿಸುತ್ತಲೇ ಇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಸಕಲೇಶಪುರದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ 125ನೇ ಶತೋತ್ತರ ಹುಣ್ಣಿಮೆ ಬೆಳದಿಂಗಳೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥಾನ ಕೊಡಮಾಡುವ ಕುವೆಂಪು ಪ್ರಶಸ್ತಿಯನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಶ್ರೀ ನಿರ್ಮಲಾನಂದ ಶ್ರೀಗಳಿಂದ ಸ್ವೀಕರಿಸಿ ಮಾತನಾಡಿದರು.‌
ವಿಶ್ವಮಾನವ ಸಂದೇಶ ಮತ್ತು ಜಾತ್ಯತೀತ ಮೌಲ್ಯಗಳಿಂದ ಐದು ತಲೆಮಾರುಗಳನ್ನು ಪ್ರಭಾವಿಸಿದ ರಾಷ್ಟ್ರಕವಿ ಕುವೆಂಪು ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಬಹಳ ದೊಡ್ಡ ಹೆಮ್ಮೆಯ ಸಂಗತಿ. ಅದರಲ್ಲೂ ಆದಿಚುಂಚನಗಿರಿ ಮಹಾಸಂಸ್ಥಾನದ ಜ್ಞಾನಯೋಗಿ ನಿರ್ಮಲಾನಂದ ಶ್ರೀಗಳ ಕೈಗಳಿಂದ ಈ ಪ್ರಶಸ್ತಿ ಸ್ವೀಕರಿಸುವ ಧನ್ಯತೆ ಇಂದು ನನ್ನದಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಕುವೆಂಪು ಅವರು ಕೇವಲ ಶ್ರೇಷ್ಠ ಸಾಹಿತಿ ಮಾತ್ರವಲ್ಲ, ನೂರಾರು ಮಂದಿ ಶ್ರೇಷ್ಠ ಸಾಹಿತಿಗಳನ್ನು ರೂಪಿಸಿದವರು. ಅವರು ಕೇವಲ ವೈಚಾರಿಕ ಕ್ರಾಂತಿಗೆ ಕರೆ ನೀಡಲಿಲ್ಲ, ಬದಲಿಗೆ ನೂರಾರು ವಿಚಾರವಾದಿಗಳನ್ನು ಸೃಷ್ಟಿಸಿದವರು ಎಂದು ವಿಶ್ಲೇಷಿಸಿದರು.
ಕುವೆಂಪು ಅವರು ಕನ್ನಡದ ಸಾಹಿತ್ಯ ಸಂಸ್ಕೃತಿ ನಿರ್ಮಾಣ ಮಾಡಿದಷ್ಟೇ ಪರಿಣಾಮಕಾರಿಯಾಗಿ
ತಮ್ಮ ಕಾವ್ಯಗಳ ಮೂಲಕ ಸ್ವಾತಂತ್ರ್ಯ ಚಳವಳಿಗೆ ಯುವ ಸಮೂಹವನ್ನು ಸಜ್ಜುಗೊಳಿಸಿ ಈ ನೆಲದ ಸ್ವತಂತ್ರಕ್ಕೆ ಅಳಿಸಲಾಗದ ಸಾಂಸ್ಕೃತಿಕ ಕೊಡುಗೆ ನೀಡಿದ ಕ್ರಾಂತಿಕಾರಿ ಎಂದರು.
ವಿಶ್ವ ವಿದ್ಯಾಲಯಗಳು ಹೇಗಿರಬೇಕು, ಜ್ಞಾನ ಪ್ರಸಾರ ಹೇಗಿರಬೇಕು ಎನ್ನುವ ಮಾದರಿಯನ್ನು ನಾಡಿಗೆ ಹಾಕಿಕೊಟ್ಟವರಲ್ಲಿ ಕುವೆಂಪು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸಮುದಾಯ ವಿಮರ್ಷೆ ಮೂಲಕ ಮಡಿವಂತ ಸಮಾಜವನ್ನು ತಿದ್ದಿದವರು ಕುವೆಂಪು ಎಂದು ಬಣ್ಣಿಸಿದರು.
ನಿರಂಕುಶಮತಿಗಳಾಗಿ ಎಂದು ಕರೆ ಕೊಡುವ ಮೂಲಕ ಐದು ತಲೆಮಾರುಗಳಿಂದ ಸ್ವತಂತ್ರ ಆಲೋಚನೆ ರೂಪಿಸಲು, ಆ ಮೂಲಕ ಐದು ತಲೆಮಾರುಗಳಿಂದ ಜಾತ್ಯತೀತ ಸಮುದಾಯವನ್ನು ರೂಪಿಸುತ್ತಲೇ ಇರುವ ಕುವೆಂಪು ಅವರು ಇವತ್ತಿಗೂ, ಎಂದೆಂದಿಗೂ ಪ್ರಸ್ತುತರಾಗಿದ್ದಾರೆ. ಹೀಗಾಗಿ ಕುವೆಂಪು ಪ್ರಜ್ಞೆ ಕನ್ನಡ ನೆಲದಲ್ಲಿ ನಿರಂತರವಾಗಿ ಬೆಳೆಯುತ್ತಲೇ ಇದೆ. ಈ ಮಹಾನ್ ಚೇತನದ ಹೆಸರಿನ ಪ್ರಶಸ್ತಿಯನ್ನು ನಾಥ ಪಂಥದ ಮಹಾನ್ ತೇರನ್ನು ಎಳೆಯುತ್ತಿರುವ ಶ್ರೀ ಶ್ರೀ ನಿರ್ಮಲಾನಂದ ಶ್ರೀಗಳಿಂದ ಸ್ವೀಕರಿಸುತ್ತಿರುವುದು ಒಂದು ಧನ್ಯತೆಯ ಕ್ಷಣ ಎಂದರು.
ಮಹಾಸಂಸ್ಥಾನದ ಹಾಸನ ಶಾಖಾಮಠದ ಶಂಭುನಾಥ ಶ್ರೀ, ಹಾಸನ ಪತ್ರಕರ್ತರ ಸಂಘದ ಅಧ್ಯಕ್ಷ ಮದನ್ ಗೌಡ, ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಟರಾಜ್, ಬಾಲಭವನ ಅಧ್ಯಕ್ಷ ಬಿ.ಆರ್. ನಾಯ್ಡು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments