ಬೆಂಗಳೂರು : ನಟಿ ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದ್ದು ಆಕೆಯ ನಂಬರ್ ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ ಮಾಡಿ ಎಂದು ವೀಡಿಯೋ ಮೂಲಕ ಉಪೇಂದ್ರ ಮನವಿ ಮಾಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಉಪೇಂದ್ರ ‘ಪ್ರಿಯಾಂಕಗೆ ಬೆಳಿಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧದ್ದೇ ಮೆಸೇಜ್ ಇದು ಎಂದು ಅವಳು ಭಾವಿಸಿದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ’ ಎಂದು ಉಪೇಂದ್ರ ಹೇಳಿದ್ದಾರೆ.
‘ನನ್ನ ಮೊಬೈಲ್ನಿಂದ ಅಥವಾ ಪ್ರಿಯಾಂಕ ಮೊಬೈಲ್ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ’ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ.
ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ ಎನ್ನಲಾಗಿದೆ.
