ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮೇ 7 ಕ್ಕೆ ಬಂಧಿಸಲಾಗಿದೆ. ಆರೋಪಿ ಮೊಹಮ್ಮದ್ ರಫೀಕ್ ಚೌಧರಿಯನ್ನು ಇವತ್ತು (ಮೇ 8)ಕ್ಕೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಮಕೋಕ (ಮಹಾರಾಷ್ಟ್ರ ಕಂಟ್ರೋಲ್ ಆಫ್ ಒರ್ಗನೈಸ್ಡ್ ಕ್ರೈಂ ಆಕ್ಟ್ ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ರಫೀಕ್ ಚೌಧರಿ, ಗ್ಯಾಂಗ್ ಸ್ಟರ್ ರೋಹಿತ್ ಗೋದಾರಾಗೆ ಪರಿಚಿತರಾಗಿದ್ದಾರೆ ಮತ್ತು ಗ್ಯಾಂಗ್ ಸ್ಟರ್ ರೋಹಿತ್ ಶಿಫಾರಸ್ಸಿನ ಮೇರೆಗೆ, ಅನ್ಮೋಲ್ ಬಿಷ್ಣೋಯ್ ಆಜ್ಞೆಯ ಮೇರೆಗೆ, ಇಬ್ಬರೂ ಶೂಟರ್ಗಳನ್ನು ಭೇಟಿಯಾಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ರಫೀಕ್ ಮುಂಬೈಯಲ್ಲಿ ಒಂದು ಮನೆ ಮತ್ತು ಚಹಾ ಅಂಗಡಿಯನ್ನು ಸಹ ಹೊಂದಿದ್ದಾನೆ ಎನ್ನಲಾಗಿದೆ . ರಫೀಕ್ ಮೇಲೆ ಶೂಟರ್ಗಳಿಗೆ ಹಣ ಪಾವತಿಸಿದ ಮತ್ತು ಅಪರಾಧ ನಡೆಸಲು ಜಾಗ ಪರಿಶೀಲನೆ ನಡೆಸಿದ ಆರೋಪವೂ ಇದೆ. ಆದರೆ ರಫೀಕ್ ಪರ ವಕೀಲರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಯಾವುದೇ ಪುರಾವೆಗಳಿಲ್ಲದೆ ತನ್ನ ಕಕ್ಷಿದಾರನನ್ನು ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ರಫೀಕ್ ಚೌಧರಿ ಕಳೆದ 5 ವರ್ಷಗಳ ಹಿಂದೆ ಗ್ಯಾಂಗ್ ಸ್ಟರ್ ರೋಹಿತ್ ಗೋದಾರಾ ಅವರನ್ನು ಒಂದು ಕೇಸ್ ವಿಚಾರಕ್ಕೆ ಭೇಟಿಯಾಗಿದ್ದರು ಎಂದು ವಕೀಲರು ಒಪ್ಪಿಕೊಂಡಿದ್ದಾರೆ.ಹೀಗಾಗಿ ನ್ಯಾಯಾಲಯವು ಆರೋಪಿ ಮೊಹಮ್ಮದ್ ರಫೀಕ್ ಚೌಧರಿಯನ್ನು ಮೇ 13 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ರೋಹಿತ್ ಗೋದಾರಾ ಅವರ ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಮತ್ತು ಅವರನ್ನು ಇನ್ನೂ ಆರೋಪಿಯನ್ನಾಗಿ ಮಾಡಿಲ್ಲ.
ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ರೋಹಿತ್ ಗೋದಾರಾ ಭಾಗಿಯಾಗಿರೋ ಬಗ್ಗೆ ಪ್ರತಿಕ್ರಿಯಿಸಿದ ಆರೋಪಿ ರಫೀಕ್ ಪರ ವಕೀಲರು, ಅವನ ವಿರುದ್ಧ ಯಾವುದೇ ಸಾಕ್ಷ್ಯಗಳನ್ನ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿಲ್ಲ ಎಂದು ಹೇಳಿದರು. ಇಡೀ ವಿಷಯವನ್ನು ಅಪರಾಧೀಕರಣಗೊಳಿಸಲಾಗುತ್ತಿದೆ. ಇಡೀ ಪ್ರಕರಣದಲ್ಲಿ, ಆರೋಪಿ ರಫೀಕ್ ಗೆ , ರೋಹಿತ್ ಗೋದಾರಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ . ಈ ಘಟನೆಯ ನಂತ್ರ ಆರೋಪಿ ರಫೀಕ್ ಭಯಭೀತನಾಗಿದ್ದ.ಇವನ ಬಳಿಯಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಹೇಳಿದರು.
ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಗುಂಡಿನ ದಾಳಿ ಪ್ರಕರಣ
ಏಪ್ರಿಲ್ 14 ರ ಬೆಳಗ್ಗೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದರು. ಗುಜರಾತ್ ನ ಸಾಬರಮತಿ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಅನ್ಮೋಲ್ ಸದ್ಯ ಯುಎಸ್ ಅಥವಾ ಕೆನಡಾದಲ್ಲಿದ್ದಾರೆ ಎನ್ನಲಾಗಿದೆ. ಅನ್ಮೋಲ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಗುಂಡಿನ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದಾಗ್ಯೂ, ಅವರ ‘ಐಪಿ ವಿಳಾಸ’ ಪೋರ್ಚುಗಲ್ ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.