ಬೆಂಗಳೂರು : ಬೆಳ್ತಂಗಡಿ ಮೂಲದ ಟೆಕ್ಕಿಯೊಬ್ಬ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಬ್ರಮಣ್ಯ ಶಾಸ್ತ್ರಿ ಬಂಧಿತ ಆರೋಪಿ.

ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಬಗ್ಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳಕ್ಕೆ ಮಾಹಿತಿ ಲಭಿಸಿತು. ಅದರಂತೆ ಪೊಲೀಸರು ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಆ.28 ರಂದು ದಾಳಿ ನಡೆಸಿತು. ಈ ವೇಳೆ ಮೂವರನ್ನು ಬಂಧಿಸಿ 15 ಮತ್ತು 16 ವಯಸ್ಸಿನ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಬೆಂಗಳೂರು ಹೊಂಗಸಂದ್ರದ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್, ಬೆಂಗಳೂರಿನ ಶಾಂತಿಪುರದ ಸೂರಜ್ ಶಾಹಜೀ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಶಾಸ್ತ್ರೀ ಬಂಧಿತರು.

ಆರೋಪಿಗಳಾದ ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಂತೆಯೇ ಮನೆ ಬಾಡಿಗೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾ ದೇಶದ ಇಬ್ಬರು ಬಾಲಕಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ದಾಳಿ ನಡೆಸಲಾಗಿದ್ದು, ಈ ವೇಳೆ ಗ್ರಾಹಕ ಬೆಳ್ತಂಗಡಿ ಮೂಲದ ಟೆಕ್ಕಿ ಕೂಡ ಸಿಕ್ಕಿಬಿದ್ದಿದ್ದಾನೆ. ಆ ಮನೆಗೆ ಆತ ಎರಡನೆ ಬಾರಿ ಬಂದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.ಇದೀಗ ಆತನ ಬಂಧನವಾಗುತ್ತಿದ್ದಂತೆ ಆತನ ಎಂಗೇಜ್ ಮೆಂಟ್ ಮುರಿದು ಬಿದ್ದಿದೆ ಎನ್ನಲಾಗಿದೆ.

ಆರಂಭದಲ್ಲಿ ತಾವು ಪಶ್ಚಿಮ ಬಂಗಾಳ ರಾಜ್ಯದವರು ಎಂದು ಸಂತ್ರಸ್ತೆಯರು ಹೇಳಿದ್ದರು. ಇದಕ್ಕೆ ಪೂರಕವಾದ ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆಗಳನ್ನು ನೀಡಿದರು. ಆದರೆ ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾಗ ಆ ಬಾಲಕಿಯರು ಅಕ್ರಮ ಬಾಂಗ್ಲಾ ದೇಶದ ವಲಸಿಗರು ಅಂತಾ ಗೊತ್ತಾಗಿದೆ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ದಂಧೆಕೋರಳಾಗಿರುವ ಕರಿಷ್ಮಾಳ ಪೂರ್ವಾಪರ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
