ಜಯಪುರ : ಮುಂಗಾರು ಕೃಷಿ ಕೆಲಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಪ್ರತಿವರ್ಷ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕೃಷಿಕರು ಭೇಟಿ ನೀಡುವ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಮಂಗಳವಾರ ಸಂಜೆ ಮೇಗುಂದಾ ಹೋಬಳಿಯ ಸುಮಾರು 122 ರೈತ ಕುಟುಂಬ ಸದಸ್ಯರು ಭೇಟಿ ಮಾಡಿ ತಾಯಿಯ ಆಶೀರ್ವಾದವನ್ನು ಪಡೆದರು.

ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರು ಮಳೆಗಾಲದ ಕೃಷಿ ಚಟುವಟಿಕೆ ಒಂದು ಹಂತದಲ್ಲಿ ಮುಗಿದ ನಂತರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ತಾಯಿಯ ದರ್ಶನವನ್ನು ಮಾಡಿ, ಸೇವೆ ಮಾಡಿಸಿದ ಪ್ರಸಾದವನ್ನು ನಮ್ಮ ಜಮೀನಿಗೆ ಹಾಕಿ ಮುಂದಿನ ವರ್ಷದ ಫಸಲು ಅಭಿವೃದ್ಧಿಯಾಗುತ್ತದೆ ಎಂಬುವ ನಂಬಿಕೆ ಇದೆ. ಅದರಂತೆ ಇಂದಿಗೂ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಹಿರೇಹಳ್ಳಿ ಪ್ರಸನ್ನ ಗಣಪತಿ ದೇವಸ್ಥಾನದ ಮುಖ್ಯಸ್ಥರು ಹಾಗೂ ಹಿರಿಯರಾದ ವಾಸುದೇವ್ ಅವರು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮೇಗುಂದಾ ಹೋಬಳಿ ವ್ಯಾಪ್ತಿಯಿಂದ 25 ಕಾರುಗಳಲ್ಲಿ ಸುಮಾರು 122 ಜನ ರೈತ ಕುಟುಂಬದವರು, ತಾವು ಬೆಳೆದ ಅಕ್ಕಿ, ಕಾಯಿ, ಹಣ್ಣುಗಳನ್ನು ದೇವಿಗೆ ಸಮರ್ಪಣೆಯನ್ನು ಮಾಡಿ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗಿಯಾಗಿ, ನಂತರ ದೇವಸ್ಥಾನದಲ್ಲಿ ಊಟ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದೇವೆ ಎಂದು ಸಂಯೋಜಕರಾದ ಲಕ್ಷ್ಮೀನಾರಾಯಣ ಬೆನ್ನೋಳ್ಳಿಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಬೆನ್ನೋಳ್ಳಿಮನೆ ಶೇಷಗಿರಿ, ಹಿರೇಹಳ್ಳಿ ರಾಮಚಂದ್ರ, ವೆಂಕಟರಮಣ, ಗೋಪಾಲಯ್ಯ ಅಗಲಗಂಡಿ, ಗೋಳಿಗುಂಡಿ ಚಂದ್ರಶೇಖರ್, ಕವಿಲುಹೊಳೆ ಅನಂತ, ಗೋಪಾಲಕೃಷ್ಣ, ಬಾಗಲಗದ್ದೆ ರಾಧಾಕೃಷ್ಣ, ಕೆರೆಮನೆ ಸುರೇಶ್, ಗುಳ್ಳೆಕುಡಿಗೆ ಸುಬ್ರಮಣ್ಯ, ನೇತ್ರಕುಡಿಗೆ ರಾಜಶೇಖರ್, ಸ್ವರ್ಣಮೇದಿನಿ ಸಿನಿಮಾದ ನಿರ್ದೇಶಕರಾದ ಪ್ರದೀಪ್ ಹೆಬ್ಬಾರ್ ಇದ್ದರು.
ವರದಿ: ಶಶಿ ಬೆತ್ತದಕೊಳಲು
