ಚಿಕ್ಕಮಗಳೂರು: ಕಾಡಾನೆ ಸೆರೆಗೆ ಹೋಗಿದ್ದ ಸಾಕಾನೆ, ಮದವೇರಿದ್ದ ಕಾಡಾನೆ ಕಂಡು ಹಿಂದಿರುಗುವಾಗ ದಾರಿ ತಪ್ಪಿ ಸಾಕಾನೆಯೇ ಮಿಸ್ ಆಗಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ 5 ದಿನಗಳ ಹಿಂದೆ ಕಾಫಿ ತೋಟದಲ್ಲಿ ಕಾರ್ಮಿಕನನ್ನ ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ರಾಜ್ಯದ ವಿವಿಧ ದುಬಾರೆಗಳಿಂದ 7 ಸಾಕಾನೆಗಳು ಬಂದಿದ್ದವು. ಗುರುವಾರ ಕಾರ್ಯಾಚರಣೆ ಕೂಡ ಆರಂಭಗೊಂಡಿತ್ತು. ಆದರೆ, ಇಂದು ಸಾಕಾನೆ ಜೂನಿಯರ್ ಅರ್ಜುನನ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಕಾಡಾನೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಮದವೇರಿದ್ದ ಕಾಡಾನೆ ಏಕಾಏಕಿ ದಾಳಿಗೆ ಮುಂದಾಗಿದೆ. ಈ ಕಾದಾಟದ ಸಂದರ್ಭದಲ್ಲಿ ಜೂನಿಯರ್ ಅರ್ಜುನ ಕಾಡಿನೊಳಗೆ ಓಡಿಹೋಗಿ ಒಂದು ಗಂಟೆಗಳ ಕಾಲ ನಾಪತ್ತೆ ಆಗಿತ್ತು.
ಅರಣ್ಯದಲ್ಲಿ ಸಾಕಾನೆಯೇ ಮಿಸ್ ಆಗಿದ್ದರಿಂದ ಅಧಿಕಾರಿಗಳು ಹಾಗೂ ಇ.ಟಿ.ಎಫ್ ಸಿಬ್ಬಂದಿಗಳು ಒಂದು ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿ ಅರ್ಜುನನನ್ನ ಪತ್ತೆ ಹಚ್ಚಿದ್ದಾರೆ. ಒಂದೆಡೆ ಮದವೇರಿದ್ದ ಕಾಡಾನೆ ಭೀತಿ, ಮತ್ತೊಂದೆಡೆ ಕಾರ್ಯಾಚರಣೆಯ ಪ್ರಮುಖ ಆನೆಯೇ ನಾಪತ್ತೆಯಾದ ಕಾರಣ ಅರಣ್ಯಾಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದರು.
ಸುಮಾರು ಒಂದು ಗಂಟೆಗಳ ಕಾಲ ಅರಣ್ಯದಾದ್ಯಂತ ಹುಡುಕಾಡಿದ ಬಳಿಕ ಕೊನೆಗೂ ಜೂನಿಯರ್ ಅರ್ಜುನ ಪತ್ತೆಯಾಗಿದ್ದು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಆನೆಯನ್ನು ಸುರಕ್ಷಿತವಾಗಿ ಕಟ್ಟಿ ಹಾಕಲಾಗಿದ್ದು ಮದವೇರಿದ ಕಾಡಾನೆಯ ಉಗ್ರ ರೂಪದಿಂದಾಗಿ ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸಿಬ್ಬಂದಿಗಳು ಹಿಂದಿರುಗಿದ್ದಾರೆ.

ಬಲಿಷ್ಠ ಗಂಡು ಕಾಡಾನೆಗೆ ಮದವೇರಿರುವುದರಿಂದ ಅರಣ್ಯಾಧಿಕಾರಿಗಳಿಗೆ ಕಾಡಾನೆ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಸುತ್ತಮುತ್ತಲಿನ ಹಳ್ಳಿಗರು, ಕಾಫಿ ತೋಟದ ಕಾರ್ಮಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಫೆ.16 ರಂದು ಓರ್ವ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಆ ಕಾಡಾನೆ ಸೆರೆಗೆ ಸರ್ಕಾರ ಆದೇಶಿಸಿದೆ. ಗುಂಪಿನಲ್ಲಿ ಮೂರು ಕಾಡಾನೆಗಳಿದ್ದು ಅದರಲ್ಲಿ ಒಂದು ಕಾಡಾನೆಯನ್ನ ಸೆರೆ ಹಿಡಿದು, ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ 7 ಕುಮ್ಕಿ ಆನೆಗಳನ್ನು ಬಳಕೆ ಮಾಡಿಕೊಂಡು ಕಾಡಾನೆ ಸೆರೆ ಹಿಡಿಯಲು ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾಡಾನೆ ದಾಳಿಗೆ ಯಲ್ಲಪ್ಪ ಎಂಬ ಕಾರ್ಮಿಕ ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿದ್ದರು.
