ಶಿರ್ವ : ಮಂಗಳೂರಿನಿಂದ ಶಿರ್ವದತ್ತ ಸಾಗುತ್ತಿದ್ದ ಮಾರುತಿ ಡಿಸೈರ್ ಕಾರೊಂದು ಸೋಮವಾರ ಮಧ್ಯರಾತ್ರಿ ಆಕಸ್ಮಿಕವಾಗಿ ರಸ್ತೆ ಮಧ್ಯದಲ್ಲೇ ಬೆಂಕಿಗಾಹುತಿಯಾದ ಘಟನೆ ನ್ಯಾರ್ಮ ಶ್ರೀ ಜಾರಂದಾಯ ದೈವಸ್ಥಾನದ ಸಮೀಪ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸೋಮವಾರ ತಡರಾತ್ರಿ ಮಂಗಳೂರಿನಿಂದ ಶಿರ್ವಕ್ಕೆ ಬರುತ್ತಿದ್ದ ಕಾರು ನ್ಯಾರ್ಮ ಪ್ರದೇಶವನ್ನು ತಲುಪುತ್ತಿದ್ದಂತೆ ಅದರ ಇಂಜಿನ್ ಭಾಗದಿಂದ ಹೊಗೆ ಹೊರಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಕಾರಿನಲ್ಲಿದ್ದ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗಿಳಿಯುವಂತೆ ಸೂಚಿಸಿದ್ದಾರೆ.

ಎಲ್ಲರೂ ಕಾರಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಇಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಾರಿಗೆ ವ್ಯಾಪಿಸಿದ್ದು, ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬೆಂಕಿಯ ತೀವ್ರತೆಯಿಂದ ಕೆಲವೇ ಸಮಯದಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕೇವಲ ಕಬ್ಬಿಣದ ಅಸ್ಥಿಪಂಜರ ಮಾತ್ರ ಉಳಿದಿದೆ. ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

ಅಕ್ಕಪಕ್ಕದ ಮನೆಗಳಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಲಾದರೂ, ಬೆಂಕಿಯು ಭಾರೀ ಪ್ರಮಾಣದಲ್ಲಿ ವ್ಯಾಪಿಸಿದ್ದರಿಂದ ಆ ಪ್ರಯತ್ನ ಫಲಕಾರಿಯಾಗಿಲ್ಲ.

ಘಟನೆಯಲ್ಲಿ ಚಾಲಕನ ಸಮಯಪ್ರಜ್ಞೆ ಮತ್ತು ಸ್ಥಳೀಯರ ತಕ್ಷಣದ ಸ್ಪಂದನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
