ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ ಬೆಳೆಯಿಂದ ಹೊರಗಿಡುವ ಬಗ್ಗೆ ಚರ್ಚಿಸಲು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದಿಂದ ಸಂಸದ ತೇಜಸ್ವಿ ಸೂರ್ಯ ಅವರನ್ನ ಭೇಟಿ ಮಾಡಿ ಮನವಿ ಮಾಡಿದರು.

ಶನಿವಾರ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಲಾಗಿತ್ತು. ಈ ವೇಳೆ ಕೋಟಾ ಶ್ರೀನಿವಾಸ ಪೂಜಾರಿಯವರು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರನ್ನ ಭೇಟಿ ಮಾಡಿ ಅವರ ಮೂಲಕ ಮನವಿ ಮಾಡಿದರು.
ಕಾಫಿ, ರಬ್ಬರ್, ಮೆಣಸು ಈ ಬೆಳೆಗಳ ವ್ಯಾಪ್ತಿಗೂ ಸರ್ಫೇಸಿ ಕಾಯ್ದೆ ಅನ್ವಯವಾಗಲಿದ್ದು, ಇದಕ್ಕೆ ಪರಿಹಾರ ಸಿಗಬೇಕಾದರೆ ಸಮಗ್ರ ಕಾನೂನು ತಿದ್ದುಪಡಿ ಮಾಡುವುದೊಂದೇ ಮಾರ್ಗ ಎಂದು ಸಂಸದರು ಸ್ಪಷ್ಟಪಡಿಸಿದರು. ಆದರೂ ನಾನು ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಕಾಫಿ, ರಬ್ಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಬೆಳೆಗಳನ್ನು ಇದರಿಂದ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೆಜಿಎಫ್ ಪದಾಧಿಕಾರಿಗಳು ಮತ್ತು ಬೆಳೆಗಾರರ ನಿಯೋಗ ಬರುತ್ತೇವೆ, ಅ ಸಂದರ್ಭದಲ್ಲಿ ನಮ್ಮೊಂದಿಗೆ ಸಂಸದರುಗಳಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೆಳೆಗಾರರ ಮರಣ ಶಾಸನವಾಗಿರುವ ಸರ್ಫೇಸಿ ಕಾಯ್ದೆ ಸಮಸ್ಯೆಗೆ ತಿಲಾಂಜಲಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಕಾಫಿ ಬೆಳೆಗಾರರ ಅಧ್ಯಕ್ಷರಾದ ಹಳಸೆ ಶಿವಣ್ಣ, ಮಾಜಿ ಅಧ್ಯಕ್ಷರಾದ ಬಿ.ಎಸ್. ಜಯರಾಮ್ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜಯರಾಂ, ಟಿ.ರಾಜಶೇಖರ್, ರತೀಶ್, ಕೆ.ಡಿ ಮನೋಹರ್, ಐ.ಎಂ. ಮಹೇಶ್, ಲಿಂಗಪ್ಪ ಗೌಡ, ನಾಗೇಶ್, ರೇವಣ್ಣ ಗೌಡ, ಯತೀಶ್, ಶ್ರೇಯಸ್, ಮಹೇಶ್, ಎಐಟಿ ರಿಜಿಸ್ಟ್ರಾರ್ ಸಿ.ಕೆ. ಸುಬ್ರಾಯ, ಪ್ರಾಂಶುಪಾಲರಾದ ಜಯದೇವ, ಕೆ.ಕೆ. ರಘು, ವಿಜಯ್ಕುಮಾರ್, ರೈತರು, ಕಾಫಿ ಬೆಳೆಗಾರರು ಈ ಸಭೆಯಲ್ಲಿ ಹಾಜರಿದ್ದರು.