Sunday, July 12, 2026
Homeಜಿಲ್ಲಾಸುದ್ದಿಮೂಗ್ತಿಹಳ್ಳಿ–ಮೂಡಿಗೆರೆ ಹೆದ್ದಾರಿ ಕಾಮಗಾರಿ ಸ್ಥಗಿತ: ರಸ್ತೆ ತಡೆ ಹೋರಾಟದ ಎಚ್ಚರಿಕೆ

ಮೂಗ್ತಿಹಳ್ಳಿ–ಮೂಡಿಗೆರೆ ಹೆದ್ದಾರಿ ಕಾಮಗಾರಿ ಸ್ಥಗಿತ: ರಸ್ತೆ ತಡೆ ಹೋರಾಟದ ಎಚ್ಚರಿಕೆ

Telegram Group
Join Now

ಮೂಡಿಗೆರೆ: ಮೂಗ್ತಿಹಳ್ಳಿ ಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಹಾಗೆ ಬಿದ್ದಿದ್ದು, ತಕ್ಷಣ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ತಡೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ರಮೇಶ್ ಗೌಡ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಕಾಮಗಾರಿಗೆ ₹430 ಕೋಟಿ ಮಂಜೂರು ಮಾಡಿದ್ದರೂ ಇದುವರೆಗೆ ಸರ್ವೇ ಕಾರ್ಯ ಮಾತ್ರ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡಿನಲ್ಲಿ ಮಾರ್ಚ್ ನಂತರ ಮಳೆ ಪ್ರಾರಂಭವಾದರೆ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಹದಿನೈದು ದಿನಗಳ ಒಳಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಂಪೇಗೌಡ ಒಕ್ಕಲಿಗರ ವೇದಿಕೆ ಕಾರ್ಯದರ್ಶಿ ಪ್ರಸಾದ್ ಬಕ್ಕಿ ಮಾತನಾಡಿ, ಹ್ಯಾಂಡ್ ಪೋಸ್ಟ್ ನಿಂದ ಮೂಡಿಗೆರೆಗೆ ಕೇವಲ 3 ಕಿ.ಮೀ ಅಂತರವಿದ್ದರೂ ರಸ್ತೆ ದುಸ್ಥಿತಿಯಿಂದ ಗಂಟೆಗಳ ಕಾಲ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಕೆಎಂ ರಸ್ತೆಯ ಅಗಲೀಕರಣ ತಕ್ಷಣ ಪ್ರಾರಂಭಿಸಬೇಕು. ಮೂರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭರವಸೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದಲ್ಲದೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಅಟ್ಟಹಾಸ ಹೆಚ್ಚಾಗಿ ರೈತರು ಮತ್ತು ಕಾರ್ಮಿಕರು ಭಯಭೀತ ಜೀವನ ನಡೆಸುವಂತಾಗಿದೆ. ಇತ್ತೀಚೆಗೆ ಕಡುಬಗೆರೆಯಲ್ಲಿ ಆನೆ ದಾಳಿಯಿಂದ ಕಾರ್ಮಿಕ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿ, ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿಚಾರ್ಜ್ ಮಾಡಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ತಕ್ಷಣ ಪ್ರಕರಣಗಳನ್ನು ವಜಾಗೊಳಿಸಬೇಕು; ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆ ರೈತರ ಹೋರಾಟಕ್ಕೆ ಕೈಜೋಡಿಸುವುದಾಗಿ ಎಚ್ಚರಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಆರ್. ಪುಟ್ಟಸ್ವಾಮಿ ಗೌಡ ಮಾತನಾಡಿ, ರಸ್ತೆ ಅಗಲೀಕರಣಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸ್ಪಷ್ಟ ಪ್ರಗತಿ ಕಂಡಿಲ್ಲ. ಇನ್ನು ಕಾಯುವ ಪ್ರಶ್ನೆಯೇ ಇಲ್ಲ; ಅಗತ್ಯವಿದ್ದರೆ ಹೋರಾಟವನ್ನು ಉಗ್ರ ರೂಪಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಬ್ರಿಜೇಶ್ ಗೌಡ ಕಡಿದಾಳ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments