ಬಾಳೆಹೊನ್ನೂರು: ಕಾಫಿ ಸಂಶೋಧನಾ ಸಂಸ್ಥೆಗೆ 100 ವರ್ಷ-‘ಕಾಫಿಯ ಅದ್ಭುತ ಭವಿಷ್ಯಕ್ಕೆ 7 ಚಿನ್ನದ ಬೀಜಗಳು’ ಘೋಷವಾಕ್ಯದಡಿ ಡಿ.20ರಿಂದ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ ಸಮಾರಂಭ
ಹೌದು.. ನಾಳೆಯಿಂದ ಅಂದರೆ 20.12.2025 ರಿಂದ 22.12.2025ರ ವರೆಗೆ 3 ದಿನಗಳ ಕಾಲ ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವಕ್ಕೆ ಕಾಫಿ ಬೆಳೆಗಾರರು, ಉದ್ಯಮಿಗಳು, ಸಾರ್ವಜನಿಕರು ಹಾಗೂ ಕಾಫಿ ಪ್ರಿಯರು, ಬೆಳೆಯ ಅವಲಂಬಿತರು ಯಶಸ್ವಿಗೊಳಿಸುವಂತೆ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಂ.ಸೆಂಥಿಲ್ ಕುಮಾರ್ ಕರೆ ನೀಡಿದ್ದಾರೆ.
1925ರಲ್ಲಿ ಮೊದಲ ಬಾರಿಗೆ ಕಾಫಿ ಬೆಳೆಯಲ್ಲಿ ಕಂಡುಬಂದಿದ್ದ ತುಕ್ಕು ರೋಗ ತಡೆಗಟ್ಟಲು ಆರಂಭಿಸಿದ ಸಂಸ್ಥೆ ಕಾಫಿ ಉದ್ಯಮ, ಬೆಳೆಗಾರರಿಗಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದೆ. ಪ್ರಸ್ತುತ ಸಂಸ್ಥೆಗೆ 100 ವರ್ಷ ತುಂಬಿದ್ದು, ಇದು ಕೇವಲ ಲೆಕ್ಕ ಮಾತ್ರ ವಲ್ಲ. ಸಂಸ್ಥೆ ಬೆಳವಣಿಗೆಯನ್ನು ಹಿಂದಿರುಗಿ ನೋಡಿದರೆ ಹಲವು ಮೈಲುಗಲ್ಲು ನೋಡಬಹುದು.
ದೆಹಲಿ ಮೂಲದ ಇವೆಂಟ್ ಮ್ಯಾನೇಜ್‌ಮೆಂಟ್ ತಂಡಕ್ಕೆ ಕಾರ್ಯಕ್ರಮದ ಉಸ್ತುವಾರಿ ನೀಡಿದ್ದು, ನೂರಾರು ಸಿಬ್ಬಂದಿ ಕಳೆದ ಒಂದು ವಾರದಿಂದ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುತ್ತಿದ್ದಾರೆ. ಮುಖ್ಯವೇದಿಕೆ, ಸಭಾಂಗಣ, ಬೆಳೆಗಾರರು, ಸಾರ್ವಜನಿಕರು ಕುಳಿತುಕೊಳ್ಳಲು ಆತ್ಯಾಧುನಿಕ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದೆ. ಪ್ರದರ್ಶನ ಮಳಿಗೆಗಳು, ಫುಡ್ ಕೋರ್ಟ್, ವ್ಯಾಪಾರ ಮಳಿಗೆಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಕಾಫಿ ಸಂಶೋಧನಾ ಕೇಂದ್ರದ ಹತ್ತಾರು ಎಕರೆ ಪ್ರದೇಶವನ್ನು ಸಂಪೂರ್ಣ ವಿದ್ಯುತ್ ದೀಪಾಲಂಕಾರವನ್ನು ಮಾಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಕಾಫಿ ಕೃಷಿಗೆ ಸಂಬಂಧಿಸಿದ ಮಹತ್ವದ ಹಲವಾರು ವಿಚಾರಗಳ ಚರ್ಚೆ ಮತ್ತು ವಿಷಯ ಮಂಡನೆಗಳು ಆಗಲಿವೆ. ಇಲ್ಲಿ ಚರ್ಚೆಯಾಗುವ ವಿಚಾರಗಳು ಪ್ರತಿಯೊಬ್ಬ ಬೆಳೆಗಾರರ ಕೃಷಿ ವಿಧಾನಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ಸಾಧ್ಯತೆಗಳಿವೆ. ಈ ಕಾರ್ಯಕ್ರಮದ ಘೋಷವಾಕ್ಯ 7 ಬೀನ್ಸ್ ಟು 7 ಲ್ಯಾಕ್ ಟನ್ಸ್ ನಂತೆ, 2047ನೇ ಇಸವಿಯೊಳಗೆ ಈ ಗುರಿ ತಲುಪುವ ತಯಾರಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ 3 ದಿನಗಳು ಪ್ರತಿಯೊಬ್ಬ ಭಾರತೀಯ ಕಾಫಿ ಬೆಳೆಗಾರರ ಮತ್ತು ಪಾಲುದಾರರ ಆಲೋಚನೆ ಬದಲಿಸುವ ವಿಶೇಷ ಕಾರ್ಯಕ್ರಮ ಆಗಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ನೋಂದಣಿ ಅಗತ್ಯವಿದೆ. ಅದರ ಸಲುವಾಗಿ ಆನ್ ಲೈನ್ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.
ವಿಐಪಿಗಳಿಗಾಗಿ ಸಿಆರ್‌ಎಸ್ ಬಿಸಿವಿ ಶಾಲೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಅತಿಥಿಗಳನ್ನು ಕರೆತರಲು 5 ಎಲೆಕ್ಟಿಕ್ ವಾಹನಗಳ ವ್ಯವಸ್ಥೆ ಕೈಗೊಳ್ಳಲಾಗಿದೆ.
ಮೊದಲಿಗೆ ಮೈಸೂರು ಕಾಫಿ ಎಕ್ಸಪರಿಮೆಂಟ್ ಸ್ಟೇಷನ್ ಹೆಸರಿನಲ್ಲಿ ಆರಂಭಗೊಂಡಿದ್ದು, ಮೈಸೂರು ಸಂಸ್ಥಾನದ ಕೃಷಿ ನಿರ್ದೇಶಕ ಡಾ. ಎಲ್.ಸಿ.ಕೊಲ್‌ಮನ್ ರಿಂದ ಲೋಕಾರ್ಪಣೆಗೊಂಡು, ಅವರೇ ಪ್ರಥಮ ನಿರ್ದೇಶಕರಾಗಿದ್ದರು. 1946ರಲ್ಲಿ ಕಾಫಿ ಮಂಡಳಿ ಎಂದು ಮರು ನಾಮಕರಣಗೊಂಡು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರವಾಗಿ ಮುಂದುವರಿಯಿತು. ಬಳಿಕ ಈ ಸಂಸ್ಥೆಯಲ್ಲಿ ಕಾಫಿ ಸಂಶೋಧನೆಗಾಗಿ ವಿವಿಧ ವಿಭಾಗಗಳನ್ನು ಆರಂಭಿಸಲಾಯಿತು.
ಪ್ರಸ್ತುತ 3.63 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದ್ದು, ರಫ್ತಿನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಸಂಸ್ಥೆ ಲೋಕಾರ್ಪಣೆಗೊಂಡ ನಂತರ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಕಾಫಿ ಸಂಶೋಧನಾ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ. ತಮಿಳುನಾಡು, ಆಂದ್ರಪ್ರದೇಶ, ಅಸ್ಸಾಂ ಮುಂತಾದ ಕಡೆಗಳಲ್ಲಿ ಕೇಂದ್ರಗಳಿದ್ದು ಅಲ್ಲಿನ ಕಾಫಿ ಬೆಳೆ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧೆಡೆಗಳಲ್ಲಿ ವಿಸ್ತರಣಾ ವಿಭಾಗಗಳನ್ನು ಸಹ ಆರಂಭಿಸಲಾಗಿದೆ. ಬೇರೆ ಯಾವುದೇ ಸಂಸ್ಥೆಗಳಿಗಿಂತ ಬಲಯುತವಾದ ಜಾಲಬಂಧವನ್ನು ಕಾಫಿ ಮಂಡಳಿ ಹೊಂದಿದೆ.
ದೇಶಾದ್ಯಂತ 16 ತಾಂತ್ರಿಕ ಅಭಿವೃದ್ಧಿ ಕೇಂದ್ರಗಳನ್ನು ಸಹ ಸಂಸ್ಥೆ ಹೊಂದಿದೆ.ದೇಶಾದ್ಯಂತ 4 ಲಕ್ಷ ಕಾಫಿ ಬೆಳೆಗಾರರಿದ್ದು, 10 ಲಕ್ಷ ಕುಟುಂಬಗಳು ಕಾಫಿ ಅವಲಂಭಿತವಾಗಿ ಜೀವನ ನಡೆಸುತ್ತಿವೆ. ನಮ್ಮಲ್ಲಿ ಉತ್ಪಾದನೆಯಾಗುವ ಶೇ.80ರಷ್ಟು ಕಾಫಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಪ್ತು ಮಾಡಲಾಗುತ್ತಿದೆ. 7 ಚಿನ್ನದ ಕಾಫಿ ಬೀಜಗಳಿಂದ ಆರಂಭಗೊಂಡ ಭಾರತದ ಕಾಫಿಯನ್ನು 7 ಲಕ್ಷ ಟನ್‌ಗೆ ತಲುಪಿಸಬೇಕು ಎಂಬುದು ನಮ್ಮ ಗುರಿ. ಕಾಫಿ ಉದ್ಯಮಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಸಂಶೋಧನಾ ಕೇಂದ್ರ 100 ವರ್ಷ ತುಂಬಿರುವುದು ಕೇವಲ ಲೆಕ್ಕ ಮಾತ್ರವಲ್ಲ.
ಇದು ಭಾರತೀಯರೆಲ್ಲರ ಕನಸು ನನಸಾಗಿ ಕೈಗೆ ಬಂದಿರುವ ದಿನವಾಗಿದೆ. ಇದನ್ನು ನಾವು ಕೇವಲ ಆಚರಣೆಗೆ ಸೀಮಿತ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಜಾತ್ರೆಯಂತೆ ಸಂಭ್ರಮಿಸಬೇಕಿದೆ.
