ಹಾಸನ: ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ ಈ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹೌದು .. ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು.
ಕುಸಿದು ಬಿದ್ದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಶ್ವೇತಾ ಸಾವನ್ನಪ್ಪಿದ್ದಾರೆ.
ಮಗಳ ಸಾವಿನ ನೋವಿನ ನಡುವೆಯೂ ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ.
