ಮೂಡಿಗೆರೆ : ತಾಲೂಕಿನ ಕಸಬಾ ಹೋಬಳಿ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವುದು ಶಾಲೆಗಳಿಂದ ಮಾತ್ರ ಸಾಧ್ಯ. ಬಡ ಮಕ್ಕಳು ಪ್ರತಿಭಾವಂತರಾಗಲು ಸರಕಾರಿ ಶಾಲೆ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.

ಅವರು ಭಾನುವಾರ ತಾಲೂಕಿನ ದಾರದಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಹಳೇ ವಿದ್ಯಾರ್ಥಿ ಸಂಘ ಸುತ್ತ ಮುತ್ತಲಿನ ಗ್ರಾಮಸ್ಥರು ಆಯೋಜಿಸಿದ್ದ ಶಾಲೆ ಶತಮಾನೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಧಾನಸೌಧ ಕಟ್ಟಿಸಿದಂತಹ ಕೆಂಗಲ್ ಹನುಮಂತಯ್ಯ ಅವರು ಈ ಶಾಲೆ ಉದ್ಘಾಟಿಸಿರುವುದು ಚಾರಿತ್ರಿಕ ವಿಚಾರ. ರಾಜ್ಯದಲ್ಲಿ ವರ್ಷಕ್ಕೆ 40ಸಾವಿರ ಕೋಟಿ ರೂ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದು, 7ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ 48 ಸಾವಿರ ಸರಕಾರಿ ಶಾಲೆಯಲ್ಲಿ 7 ಸಾವಿರ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದೆ ಎಂಬ ವರದಿ ದೊರಕಿದೆ. ಇದಕ್ಕೆ ಕಾರಣ ಖಾಸಗಿ ಶಾಲೆ ಹಾಗೂ ನಾನಾ ಕಾರಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ಉಳಿಸಿ ಬೆಳೆಸಿ ಶತಮಾನೋತ್ಸವ ಆಚರಣೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಆಳುವ ಸರಕಾರಗಳು ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಅನುದಾನ ಕಡಿಮೆ ಪ್ರಮಾಣದಲ್ಲಿ ಕೊಡುತ್ತಿದೆ. ಇದು ಆಗಬಾರದು. ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಬಜೆಟ್‌ನಲ್ಲಿ ಅಧಿಕ ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಒಂದು ಶಾಲೆ ಯಶಸ್ಸಿನತ್ತ ಸಾಗಬೇಕೆಂದರೆ ಶಿಕ್ಷಕರು, ಪೋಷಕರು, ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಸಾಮಾನ್ಯ ಪ್ರಜ್ಞೆ ಜಾಗೃತಗೊಳಿಸುವಂತಹ ಭಾವನೆ ಹಾಗೂ ಪ್ರತಿಭೆಗಳು ಮಕ್ಕಳಲ್ಲಿರುತ್ತದೆ. ಅದನ್ನು ಗುರುತಿಸಿ ಹೊರ ತರುವ ಸಾಂಸ್ಕೃತಿಯಾದ ಜವಾಬ್ದಾರಿ ಹಾಗೂ ಗುರುಪರಂಪರೆ ಹೊಂದಿರುವ ಈ ನಾಡನ್ನು ಮುಂದುವರೆಸಿಕೊಂಡು ಹೋಗುವುದು ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ ಸರಕಾರಿ ಶಾಲೆಗಳನ್ನು ಕ್ರೂಢೀಕರಿಸಿ ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ. ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿರುವ ಶೌಚಾಲಯಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆ, ಶಿಸ್ತು ಸೇರಿದಂತೆ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ವ್ಯವಸ್ಥೆ ರೂಪಿಸಿಕೊಂಡರೆ ಎಲ್ಲಾ ಸರಕಾರಿ ಶಾಲೆಗಳು ಶತಮಾನೋತ್ಸವ ಆಚರಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಮಾಜಿ ಯೋಧರು, ವೈದ್ಯರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಡಿ.ಸಿ.ರವಿಕುಮಾರ್, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಿ.ಬಿ.ಜಯಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್.ರಮೇಶ್, ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಸಿದ್ದೇಶ್, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್, ರಂಜನ್ ಅಜಿತ್‌ಕುಮಾರ್, ಡಿ.ಕೆ.ಉದಯಶಂಕರ್, ದೀಪಕ್‌ದೊಡ್ಡಯ್ಯ, ಡಿ.ಬಿ.ಅಶೋಕ್, ಲಕ್ಷ್ಮಣ್‌ಗೌಡ ಮಗ್ಗಲಮಕ್ಕಿ, ಡಿ.ಆರ್.ರಘುಪತಿ, ಶಾಲೆ ಮುಖ್ಯ ಶಿಕ್ಷಕಿ ಜಿ.ರೂಪ, ಶಿಕ್ಷಕರಾದ ಮಂಜಪ್ಪ,ಚೇತನ್, ಶಿಕ್ಷಕಿ ಜಯಲಕ್ಷ್ಮಿ ಸೇರಿದಂತೆ ಮುಂತಾದವರಿದ್ದರು
ವರದಿ:ಪುನೀತ್ ಕಡಿದಾಳು
9483811948
