ಚಿಕ್ಕಮಗಳೂರು: ಕಾಫಿನಾಡಿನ ಸಹಕಾರ ಕ್ಷೇತ್ರದ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಗೆ ತಲುಪಿದೆ.ಹೀಗಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಕ ಮೂಡಿಸಿದೆ ಎಂದರೆ ತಪ್ಪಾಗಲಾರದು.
ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಸಿ.ಟಿ.ರವಿ ಮತ್ತು ಎಸ್ ಎಲ್. ಭೋಜೇಗೌಡ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತ ನಿರಂಜನ್ ಅವರು ಪೈಪೋಟಿ ನಡೆಸಿದ್ದಾರೆ.
ಅವಿರೋಧ ಆಯ್ಕೆಯ ನಿರೀಕ್ಷೆಯಲ್ಲಿದ್ದ ಮೈತ್ರಿ ನಾಯಕರಿಗೆ ಬಂಡಾಯ ಅಭ್ಯರ್ಥಿಯ ಸ್ಪರ್ಧೆಯು ಅಡ್ಡಮತದಾನ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಒಗ್ಗೂಡಿಸಲು ಧರ್ಮಸ್ಥಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಒಟ್ಟು 32 ಮತದಾರರಿರುವ ಈ ಕ್ಷೇತ್ರದಲ್ಲಿ ಮತಗಳು ವಿಂಗಡಣೆಯಾಗದಂತೆ ತಡೆಯಲು ಮೈತ್ರಿ ನಾಯಕರು ಮತದಾರರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ.
ಇದೇ ತಿಂಗಳ 17ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಂದೇ ಸಂಜೆ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ.
