Tuesday, May 12, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಉದ್ಗಾಟಿಸಿದ ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಉದ್ಗಾಟಿಸಿದ ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು:ಮಹಾತ್ಮಾಗಾಂಧೀಜಿಯವರ ನೇತೃತ್ವದ ಅಹಿಂಸಾತ್ಮಕ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಮುಖ ಕಾರಣ ಎಂದು ಕರ್ನಾಟಕ ರಾಜ್ಯ ಇಂಧನ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.

ಬ್ರಿಗ್ರೆಡ್ ಫೌಂಡೇಶನ್ ನಗರದ ಹೊಸಮನೆ ವೃತ್ತದಲ್ಲಿ ಭವ್ಯವಾಗಿ ನಿರ್ಮಿಸಿರುವ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ’ವನ್ನು ಅಕ್ಟೋಬರ್‌ 2ರಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕೆಲಸ ಈ ಮೂಲಕ ಆಗಿದೆ. ಜಿಲ್ಲೆಯ ಹಿರಿಯರೂ ನಾಯಕತ್ವವಹಿಸಿ ಹೋರಾಟ ಮಾಡಿದ್ದಾರೆ. ಇದೊಂದು ಅಪೂರ್ವ ಕಾರ್‍ಯ. ವಿಶೇಷವಾಗಿ ಯುವಜನತೆಗೆ ಸ್ಫೂರ್ತಿ ಮತ್ತು ಪ್ರೇರಣದಾಯಕವಾಗಿ ನಿರ್ಮಾಣಗೊಂಡಿದೆ ಎಂದು ಸಚಿವರು ಬ್ರಿಗೆಡ್ ಕಾರ್‍ಯವನ್ನು ಶ್ಲಾಘಿಸಿದರು.

ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ಕ್ರಾಂತಿಕಾರಿಗಳ ತ್ಯಾಗ ಬಲಿದಾನಗಳ ಕೊಡುಗೆ ಗಮನಾರ್ಹ. ಬ್ರಿಟೀಷ್ ಸೈನ್ಯದ ವಿರುದ್ಧ ಅನೇಕ ರಾಜಮಹಾರಾಜರೂ ಹೋರಾಟ ಮಾಡಿದ್ದಾರೆ. ಆದರೆ ಇದರಿಂದ ಸ್ವಾತಂತ್ರ್ಯ ಗಳಿಸಲಾಗಲಿಲ್ಲ. ಬ್ರಿಟೀಷರ ತುಪಾಕಿ, ಮದ್ದುಗುಂಡುಗಳ ಪರಿಣಿತಿ ವಿಶೇಷವಾಗಿತ್ತು. ಆದರೆ ಮಹಾತ್ಮಾಗಾಂಧೀಜಿ ಅವರ ಅಹಿಂಸಾ ರೀತಿಯ ಹೋರಾಟ ಬ್ರಿಟಿಷರು ಇಲ್ಲಿಂದ ತೆರಳುವಂತಾಯಿತು. ಗಾಂಧೀಜಿ ಅವರುಕೊಟ್ಟ ಸಹಿಷ್ಣುತೆ, ಸರ್ವಧರ್ಮ ಸಮಭಾವ, ರಾಮರಾಜ್ಯ ಪರಿಕಲ್ಪನೆ, ಗ್ರಾಮಸ್ವರಾಜ್ಯ ಕಾರ್‍ಯಕ್ರಮಗಳು ಸ್ವಾತಂತ್ರ್ಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂಬುದು ತಮ್ಮ ನಂಬಿಕೆ ಎಂದು ಸಚಿವ ಜಾರ್ಜ್ ನುಡಿದರು.

ದೇವದಾನ, ಸೀಗೋಡು, ಭದ್ರಾ, ಸಂಗಮೇಶ್ವರ ಗ್ರೂಫ್ ಆಫ್ ಎಸ್ಟೇಟ್ಸ್‌ಗಳಲ್ಲಿ ಬೀಟೆಮರ ಖರೀದಿಸುವ ವ್ಯಾಪಾರದಲ್ಲಿ ಅರಣ್ಯ ಇಲಾಖೆಯೊಂದಿಗೆ ದಾಖಲಾತಿಗಳನ್ನು ನೀಡಿ ಅನುಮತಿ ಪಡೆಯುವ ಕೆಲಸ ನಿರ್ವಹಿಸುತ್ತಿದುದ್ದನ್ನು ನೆನಪಿಸಿಕೊಂಡ ಜಾರ್ಜ್, ರಾಜ್ಯ ಯುವಕಾಂಗ್ರೇಸ್ ಅಧ್ಯಕ್ಷರಾದ ಮೇಲೆ ಡಿ.ಬಿ.ಚಂದ್ರೇಗೌಡರ ಚುನಾವಣೆ ಸೇರಿದಂತೆ ಹಲವು ಬಾರಿ ಜಿಲ್ಲೆಯಲ್ಲಿ ಪಕ್ಷಸಂಘಟನೆಗಾಗಿ ತೊಡಗಿದ್ದನ್ನು ಉಲ್ಲೇಖಿಸಿ ಜಿಲ್ಲಾ ಉಸ್ತುವಾರಿ ಸಚಿವಸ್ಥಾನ ಅಪೇಕ್ಷಿಸಿದ್ದಲ್ಲ ಸಿ.ಎಂ.-ಪಕ್ಷ ನೀಡಿದ ಹೊಣೆಗಾರಿಕೆ. ಇಲ್ಲಿಯ ಶಾಸಕರನ್ನೆ ಮಂತ್ರಿಯಾಗಿಸಿ ಅವರಿಗೆ ಉಸ್ತುವಾರಿ ಸಚಿವಸ್ಥಾನ ನೀಡಬೇಕೆಂಬುದು ತಮ್ಮ ಅಪೇಕ್ಷೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಮಹಾತ್ಮಾಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಗಳಂತಹ ಪುಣ್ಯಪುರುಷರ ಜನ್ಮದಿನದಂದು ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣ. ಚಿಕ್ಕಮಗಳೂರಿನಲ್ಲಿ ಹುಟ್ಟಿಬೆಳೆದು ಬೆಂಗಳೂರು ಸೇರಿ ತಮ್ಮದೇ ಬ್ರಿಗ್ರೆಡ್ ಸಾಮ್ರಾಜ್ಯ ನಿರ್ಮಿಸಿರುವ ಜಯಶಂಕರ್ ತಂಡ ಹುಟ್ಟೂರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅಂದದ ಸ್ಮಾರಕ ರಚಿಸಿರುವುದು ಅಭಿನಂದನಾರ್ಹ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ಅಂದಿನ ಹೋರಾಟ, ಗಾಂಧೀಜಿ ಅವರ ಅನುಭವ ಜೀವಂತವಾಗಿಡಬೇಕು. ನಿರಂತರವಾದ ಸಮಾಜಜಾಗೃತಿ, ಎಲ್ಲರೂ ಒಂದೆಂಬ ಭಾವದಿಂದ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರಕ. ಕರ್ತವ್ಯವನ್ನು ನಿರ್ವಹಿಸಿ ಹಕ್ಕನ್ನು ಕೇಳಬೇಕೆಂಬುದು ತಿಳಿಸುತ್ತದೆ ಎಂದರು.

ದೂರದರ್ಶನ ನಿರೂಪಕ ಶಂಕರಪ್ರಕಾಶ್ ಕಾರ್‍ಯಕ್ರಮ ನಿರೂಪಿಸಿದ್ದು, ಜಯಶಂಕರ್ ಸ್ವಾಗತಿಸಿ, ಸಿಇಓ ಶಿವಯೋಗಿಕಳಸದ ವಂದಿಸಿದರು. ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿ.ಪಂ.ಸಿಇಓ ಕೀರ್ತನಾ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯ ಕುಮಾರ, ಸ್ಮಾರಕದ ವಾಸ್ತುಶಿಲ್ಪಿ ಸಂಜಯ್, ಬ್ರಿಗ್ರೆಡ್ ನಿರ್ದೇಶಕರಾದ ಎಂ.ಆರ್.ಗುರುಮೂರ್ತಿ ಮತ್ತು ನಿರೂಪಾಶಂಕರ್ ಮತ್ತಿತರರು ವೇದಿಕೆಯಲ್ಲಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!