ಚಿಕ್ಕಮಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ 2,56,69.620 ರೂಪಾಯಿಗಳನ್ನು ಕಳೆದುಕೊಂಡು ಸೈಬರ್ ವಂಚಕರ ಬಲೆಗೆ ಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್ ಗೆ ಬಂದ ವಾಟ್ಸ್ ಆಪ್ ಕರೆಯೊಂದರಲ್ಲಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಆಸಕ್ತಿ ಇದೆಯೇ ಎಂದು ವಿಚಾರಿಸಲಾಗಿತ್ತು. ಈ ವೇಳೆ ವಂಚಕರು ಕೇವಲ ಸಾವಿರ ಜನರಿಗೆ ಮಾತ್ರ ವಿಶೇಷ ಆಫರ್ ಇದೆ ಎಂದು ನಂಬಿಸಿ ಇವರಿಂದ ಒಂದು ವರ್ಚುವಲ್ ಖಾತೆಯನ್ನು ತೆರೆಯಿಸಿದ್ದರು. ಟ್ರೇಡಿಂಗ್ ಪ್ರಾರಂಭಿಸಿದ ಆರಂಭದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿದ ಕಿರಾತಕರು, ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2.56 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ತಾವು ಹೂಡಿಕೆ ಮಾಡಿದ ಅಸಲು ಹಣ ಮತ್ತು ಬಂದಿರುವ ಲಾಭಾಂಶವನ್ನು ಹಿಂಪಡೆಯಲು ಮುಂದಾದಾಗ, ಪ್ರತಿ ಬಾರಿಯೂ ಒಟ್ಟು ಮೊತ್ತದ ಶೇ.20ರಷ್ಟು ಹಣವನ್ನು ಡೆಪಾಸಿಟ್ ಇಡಬೇಕು ಎಂಬ ಹೊಸ ಷರತ್ತನ್ನು ವಂಚಕರು ವಿಧಿಸಿದ್ದರು. ಅದರಂತೆ ಹಣ ಪಾವತಿಸಿದರೂ ಸಹ ಒಂದು ರೂಪಾಯಿಯನ್ನೂ ಡ್ರಾ ಮಾಡಲು ಸಾಧ್ಯವಾಗದಿದ್ದಾಗ ತಾವು ಮೋಸ ಹೋಗಿರುವುದು ಪ್ರಜ್ಞಾ ಅವರಿಗೆ ಮನವರಿಕೆಯಾಗಿದೆ.

ತಾವು ಕಷ್ಟಪಟ್ಟು ಸಂಪಾದಿಸಿದ ಕೋಟ್ಯಂತರ ರೂಪಾಯಿ ಹಣವನ್ನು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

