Friday, March 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ವಿಕಸಿತ ಭಾರತಕ್ಕೆ ಹಾದಿ ತೋರುವ ವಾಸ್ತವಿಕ ಬಜೆಟ್: ಡಾ.ರವಿ ಸಿ.ಟಿ

ಚಿಕ್ಕಮಗಳೂರು: ವಿಕಸಿತ ಭಾರತಕ್ಕೆ ಹಾದಿ ತೋರುವ ವಾಸ್ತವಿಕ ಬಜೆಟ್: ಡಾ.ರವಿ ಸಿ.ಟಿ

ಚಿಕ್ಕಮಗಳೂರು: ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತದ ಸಾಧನೆಗೆ ದಾರಿ ತೋರುವಂತಹ ದೂರದರ್ಶಿ ಬಜೆಟ್ ಆಗಿದೆ. ಭಾರತವನ್ನು ಸ್ವಾವಲಂಬಿ ಆಗಿಸುವ ನಿಟ್ಟಿನಲ್ಲಿ ಈ ಬಜೆಟ್ ಅತ್ಯಂತ ವಾಸ್ತವಿಕವೂ, ಮಹತ್ವದ್ದೂ ಆಗಿದೆ ಎಂದು ಡಾ.ರವಿ ಸಿ.ಟಿ ಅವರು ಹೇಳಿದರು.

ಇಂದು ಬಜೆಟ್‌ ಬಳಿಕ ಮಾಧ್ಯಮ ಪ್ರಕರಣೆ ಹೊರಡಿಸಿದ ಅವರು, ಕೃಷಿಯಿಂದ ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ, ಶಿಕ್ಷಣ ಕ್ಷೇತ್ರದ ತನಕ ಎಲ್ಲ ಕ್ಷೇತ್ರಗಳಿಗೂ ಪ್ರಸ್ತುತ ಬಜೆಟ್ ಆದ್ಯತೆ ನೀಡಿದೆ. ಆರ್ಥಿಕ ಶಿಸ್ತು, ಜನಪರ ನೀತಿಗಳಿಗೆ ಬಜೆಟ್ ಆದ್ಯತೆ ನೀಡಿದೆ. ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಗೇರು ಮತ್ತು ಕೋಕೋದಂತಹ ಬೆಳೆಗಳನ್ನು ಜಾಗತಿಕ ರಫ್ತು ಉತ್ಪನ್ನಗಳಾಗಿ ರೂಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಕೃಷಿ ಪೋರ್ಟಲ್‌ಗಳು, ಐಸಿಎಆರ್ ಕೃಷಿ ಪ್ಯಾಕೇಜ್‌ಗಳು ಎಐ ಜೊತೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಲಿರುವುದು ಸ್ವಾಗತಾರ್ಹ. ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ಸ್ವ-ಸಹಾಯ ಉದ್ಯಮಗಳು ಅಂದರೆ ಶಿ-ಮಾರ್ಟ್ಗಳನ್ನು ಸ್ಥಾಪಿಸುವುದು ಉತ್ತಮ ನಡೆ.

ಆತ್ಮನಿರ್ಭರ ಭಾರತದ ಸಾಧನೆಗಾಗಿ 2,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಸಣ್ಣ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೇಂದ್ರ ಏಳು ಹೈಸ್ಪೀಡ್ ರೈಲು ಯೋಜನೆಗಳನ್ನು ನೀಡಿದ್ದು, ಬೆಂಗಳೂರಿಗೆ ಹೈದರಾಬಾದ್ ಮತ್ತು ಚೆನ್ನೈಗಳಿಂದ ಹೈಸ್ಪೀಡ್ ರೈಲು ಸಂಪರ್ಕ ಲಭಿಸಿದೆ. ಇದು ರಾಜ್ಯದ ಪ್ರಗತಿಗೆ ನೆರವಾಗಲಿದೆ.

ಭಾರತದ ಅಭಿವೃದ್ಧಿಗೆ ಸೆಮಿಕಂಡಕ್ಟರ್‌ಗಳು ಅತ್ಯಂತ ಮಹತ್ವ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಂಡಿದೆ. ದೇಶವನ್ನು ಸುರಕ್ಷಿತವಾಗಿಸಲು ಸೆಮಿಕಂಡಕ್ಟರ್ ವಿಷನ್ 2.0 ಯೋಜನೆಯಡಿ 40,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತದೆ.
ಆತ್ಮನಿರ್ಭರತೆಯನ್ನು ನಮ್ಮ ಮಾರ್ಗದರ್ಶಿ ಸೂತ್ರವಾಗಿಸಿಕೊಂಡು ದೇಶೀಯ ಉತ್ಪಾದನಾ ಸಾಮರ್ಥ್ಯ, ಇಂಧನ ಭದ್ರತೆ ಮತ್ತು ಅಗತ್ಯ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಭಾರತವನ್ನು ಬಯೋಫಾರ್ಮಾ ಕೇಂದ್ರವಾಗಿಸಲು ಸರ್ಕಾರ ಆದ್ಯತೆ ನೀಡಿದೆ. ಒಡಿಶಾ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲು ಆಲೋಚಿಸಲಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಆದ್ಯತೆ ನೀಡಿದ್ದು, ಹೆಣ್ಣು ಮಕ್ಕಳ ವ್ಯಾಸಂಗಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳನ್ನು ತೆರೆಯುವ ತೀರ್ಮಾನ ಮಹಿಳಾ ಶಿಕ್ಷಣಕ್ಕೆ, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ. 12 ಲಕ್ಷದವರೆಗಿನ ವಾರ್ಷಿಕ ಆದಾಯವು ತೆರಿಗೆಯಿಂದ ಮುಕ್ತವಾಗಿರುವ ತೆರಿಗೆಯನ್ನು ಬಜೆಟ್‌ನಲ್ಲಿ ಉಳಿಸಿಕೊಳ್ಳಲಾಗಿದೆ. 75,000 ರೂ. ಪ್ರಮಾಣಿತ ಕಡಿತವನ್ನು ಸೇರಿಸಿದರೆ, ತೆರಿಗೆ ಮುಕ್ತ ಆದಾಯವು 12,75,000 ರೂ.ಗೆ ಏರುತ್ತದೆ. ಇದು ನಿಜಕ್ಕೂ ಮಧ್ಯಮವರ್ಗ ಸ್ನೇಹಿ ನಡೆ.

ಸುಂಕ ವಿನಾಯಿತಿಯಿಂದಾಗಿ ಸುಮಾರು 17 ಕ್ಯಾನ್ಸರ್ ಔಷಧಿಗಳು ಅಗ್ಗವಾಗಲಿವೆ. ಇದಲ್ಲದೆ, ಇತರ ಏಳು ಅಪರೂಪದ ಕಾಯಿಲೆಗಳ ಔಷಧಿಗಳಿಗೆ ಸುಂಕ ರಹಿತ ವೈಯಕ್ತಿಕ ಆಮದಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಸರ್ಕಾರದ ಮಾನವೀಯ ನಡೆಯಾಗಿದ್ದು, ಶ್ಲಾಘನೀಯವಾಗಿದೆ. ಸರ್ಕಾರವು ಬಂಡವಾಳ ವೆಚ್ಚದ ಹೂಡಿಕೆಯನ್ನು 12 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಇದಲ್ಲದೆ, ಪ್ರವಾಸೋದ್ಯಮ, ರೈಲ್ವೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದ್ದು, ಇದು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸರಕು ಸಾಗಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಮೇಲೂ ಗಮನ ಕೇಂದ್ರೀಕರಿಸಲಾಗಿದೆ.

ಒಟ್ಟಾರೆಯಾಗಿ, ನೆಲದಾಳದಿಂದ ಬಾಹ್ಯಾಕಾಶದ ತನಕ ದೂರದೃಷ್ಟಿಯ ಅಂಶಗಳನ್ನು ಹೊಂದಿರುವ ಈ ಬಜೆಟ್, ನಿಜಕ್ಕೂ ದೇಶವನ್ನು ಪ್ರಗತಿಯ ಪಥದಲ್ಲಿ ನಡೆಸಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!