ಚಿಕ್ಕಮಗಳೂರು: ತಾಲೂಕಿನ ಲಕ್ಯಾ, ಕಸಬಾ ಮತ್ತು ಅಂಬಳೆ ಹೋಬಳಿ ಹಾಗೂ ಕಡೂರು ತಾಲೂಕನ್ನು ಬರಪೀಡಿತ ಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಟ್ಟಿರುವುದನ್ನು ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಮಹೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ ನರಸಿಂಹರಾಜಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಸದಾ ಮಳೆಯಿಲ್ಲದೆ ಕಂಗೆಡುವ ಕಡೂರು ಹಾಗೂ ಚಿಕ್ಕಮಗಳೂರಿನ ಭಾಗಗಳನ್ನು ಕಡೆಗಣಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅವೈಜ್ಞಾನಿಕ ಸಮೀಕ್ಷೆಗೆ ಸಾಕ್ಷಿಯಾಗಿದೆ ಎಂದು ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಪ್ರಕಟಿಸಲಿರುವ ಎರಡನೇ ಪಟ್ಟಿಯಲ್ಲಿ ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸೇರ್ಪಡೆ ಮಾಡಲು ಶಾಸಕರಿಗೆ 15 ದಿನಗಳ ಗಡುವು ನೀಡಲಾಗಿದ್ದು, ತಪ್ಪಿದಲ್ಲಿ ಶಾಸಕರ ಮನೆ ಹಾಗೂ ಕಚೇರಿಗಳ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ಕರೆ ಕೊಟ್ಟಿದ್ದಾರೆ.
