ಚಿಕ್ಕಮಗಳೂರು: ನಗರದ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆಂಜನೇಯ (25), ಸುಬ್ರಮಣ್ಯ (25) ಹಾಗೂ ಸಂಜಯ್ (20) ಬಂಧಿತ ಆರೋಪಿಗಳು.
ಶ್ರೀಗಂಧ ಕಳವು ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಾನ್ಯ ಜಿತೇಂದ್ರ ಕುಮಾರ್ ದಯಾಮ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಉಪವಿಭಾಗ ಪೊಲೀಸ್ ಉಪಾಧೀಕ್ಷಕ ನಾಗರಾಜು ಎ.ಆರ್., ಸಿಪಿಐ ವಿಜಯ್ ಕುಮಾರ್ ಬಿರಾದಾರ್, ಬಸವನಹಳ್ಳಿ ಠಾಣೆಯ ಪಿಎಸ್ಐಗಳಾದ ಕೀರ್ತಿ ಕುಮಾರ್ ಹಾಗೂ ಅಜರುದ್ದೀನ್ ಮತ್ತು ಸಿಬ್ಬಂದಿಗಳಾದ ರವೀಂದ್ರ, ಲಿಂಗಮೂರ್ತಿ ಹಾಗೂ ಮಧುಸೂಧನ್ ಅವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಶ್ರೀಗಂಧದ ಮರಗಳ ಕಳವು ಪ್ರಕರಣಗಳನ್ನು ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು 5 ಲಕ್ಷ ರೂ. ಮೌಲ್ಯದ 93 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ 93 ಕೆಜಿ ಶ್ರೀಗಂಧ, ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕೆಎ 18 ಇಎನ್ 6681 ನೋಂದಣಿ ಸಂಖ್ಯೆಯ ಕೆಟಿಎಂ ಬೈಕ್ (ಅಂದಾಜು ಮೌಲ್ಯ 2 ಲಕ್ಷ ರೂ.) ಅನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕದ್ದಮಾಲನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆ ತನಿಖಾ ಕಾರ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಯವರ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ
