ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರತೀಯ ಜನಸಂಘ ಕಟ್ಟಿ, ಕ್ರಮೇಣ ಬಿಜೆಪಿ ಜಿಲ್ಲೆಯಲ್ಲಿ ಚಿಗುರೊಡೆಯಲು ಕಾರಣಕರ್ತರಾದ ಹಿರಿಯ ಮುತ್ಸದ್ಧಿ ವಿಠಲಾಚಾರ್ಯ(90) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ತೀರಾ ನಿಷ್ಠುರವಾದಿ ಎಂದೇ ಗುರುತಿಸಿಕೊಂಡಿದ್ದ ವಿಠಲಾಚಾರ್ಯ ಅವರು, ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಂಡು ರಾಜಕೀಯ ನಡೆಸಿದವರಲ್ಲ. ಜೀವನದ ಕೊನೆಕ್ಷಣದವರೆಗೂ ಸ್ವಾಭಿಮಾನದ ಜೀವನವನ್ನ ನಡೆಸಿದವರು.ಹಿರಿಯ ಮಾರ್ಗದರ್ಶಕನ ನಿಧನಕ್ಕೆ ಚಿಕ್ಕಮಗಳೂರು ಬಿಜೆಪಿ, ಕಣ್ಣೀರ ವಿದಾಯ ತಿಳಿಸಿದೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಡೀ ಅಂದಿನ ವ್ಯವಸ್ಥೆಯನ್ನ ಮುಲಾಜಿಲ್ಲದೇ ಪ್ರಶ್ನಿಸಿದ ವೈಕರಿ, ಜನಮಾನಸದಲ್ಲಿ ಇಂದಿಗೂ ಇದೆ.ಚಿಕ್ಕಮಗಳೂರು ನಗರಸಭೆಯ ಸದಸ್ಯರಾಗಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದನ್ನ, ಅವರನ್ನ ಹತ್ತಿರದಿಂದ ಬಲ್ಲವರು ಮೆಲುಕು ಹಾಕುತ್ತಾರೆ.
ವಿಠಲಾಚಾರ್ಯ ಅಂತಿಮ ದರ್ಶನ ಪಡೆದ ಸಿ.ಟಿ ರವಿ.!
ಇನ್ನೂ ವಿಠಲಾಚಾರ್ಯ ಅವರ ಪಾರ್ಥಿವ ಶರೀರದ ದರ್ಶನದ ಪಡೆದ ಪರಿಷತ್ ಸದಸ್ಯ ಸಿ.ಟಿ ರವಿ, ಹಿರಿಯ ಮುತ್ಸದ್ಧಿ ವಿಠಲಾಚಾರ್ಯ ಅವರು ನಡೆದುಬಂದ ಹಾದಿಯನ್ನ ಸ್ಮರಿಸಿದರು. ಯಾವುದೇ ಸಂದರ್ಭದಲ್ಲೂ ಕೂಡ ವಿಠಲಾಚಾರ್ಯ ಅವರು ರಾಜಿಯಾದವರೇ ಅಲ್ಲ. ನನ್ನ ರಾಜಕೀಯ ಪಯಣದಲ್ಲಿ ಕೂಡ ಅವರ ಮಾರ್ಗದರ್ಶನ ಸಾಕಷ್ಟಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸರು ಅಂಗಡಿಯ ಬಾಗಿಲು ಹಾಕಿಸಲು ಬಂದಾಗ, ನನ್ನ ಅಂಗಡಿ, ನನ್ನ ಇಷ್ಟ ಬಾಗಿಲು ಹಾಕಬೇಕೋ..? ಬೇಡವೋ ಅನ್ನೋದನ್ನ ನಾನು ನಿರ್ಧರಿಸುತ್ತೇನೆ ಅಂತಾ ಹೇಳಿದ ನಿಷ್ಠುರವಾದಿ ಅವರು ಅಂತಾ ನೆನಪಿಸಿಕೊಂಡರು. ಬಿಜೆಪಿ ಜಿಲ್ಲೆಯಲ್ಲಿ ಗಟ್ಟಿಯಾಗಿ ಬೇರೂರಲು ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿಯೇ ಅವರ ಪಾರ್ಥೀವ ಶರೀರರವ ಪಕ್ಷದ ಕಚೇರಿಗೆ ತೆಗೆದುಕೊಂಡು ಹೋಗಿ, ಬಿಜೆಪಿ ಬಾವುಟವನ್ನ ಹಾಕಿ ಗೌರವ ಸಲ್ಲಿಸಲಾಯ್ತು ಎಂದರು.
ಇನ್ನೂ ಇದೇ ವೇಳೆ ಬಿಜೆಪಿಯ ಹಲವು ಮುಖಂಡರು ವಿಠಲಾಚಾರ್ಯ ಅವರ ಅಂತಿಮ ದರ್ಶನವನ್ನ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಪಡೆದರು. ಪಕ್ಷಕ್ಕಾಗಿ ಅವರ ನಿಸ್ವಾರ್ಥ ಸೇವೆ, ನಿಷ್ಠುರವಾದಿತನ, ಸ್ವಾಭಿಮಾನದ ಬಗ್ಗೆಯೇ ಮೃತರ ನಿವಾಸದಲ್ಲಿ ಸೇರಿದ್ದ ಹಲವರು ಮಾತಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
