ಚಿಕ್ಕಮಗಳೂರು: ಡಿಸೆಂಬರ್ ತಿಂಗಳ 2 ರಿಂದ 4 ರ ವರೆಗೆ ನಡೆಯಲಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧಾರಣೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಸಿ .ಟಿ .ರವಿ, ಪ್ರಮೋದ್ ಮುತಾಲಿಕ್, ಸಕಲೇಶಪುರ ರಘು, ರಂಗನಾಥ್, ಯೋಗೀಶ ಅರಸ್, ಆಲ್ದೂರು ಶಶಿ, ದತ್ತಮಾಲೆ ಕುರಿತ ಕೈಪಿಡಿ ಬರೆದ ಜಗನ್ನಾಥಶಾಸ್ತ್ರಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ದತ್ತ ಭಕ್ತರು ಮಾಲೆ ಧಾರಣೆ ಮಾಡಿದರು.
ದತ್ತ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದತ್ತಾತ್ರೇಯ ಭಜನೆ ಬಳಿಕ ಮಾಲಾಧಾರಣ ಕಾರ್ಯಕ್ರಮ ನಡೆಯಿತು. 20 ವರ್ಷಗಳ ಬಳಿಕ ಪ್ರಮೋದ್ ಮುತಾಲಿಕ್ ಸಂಘ ಪರಿವಾರದ ಜೊತೆ ಮಾಲೆ ಧರಿಸಿದ್ದು ವಿಶೇಷ.
ಸಮಿತಿ ರಚಿಸಿ: ಬಾಬಾಬುಡನ್ ಗಿರಿ ದತ್ತಪೀಠ ಬೇರೆ ಬೇರೆ ಎನ್ನುವುದನ್ನು ಹಲವು ಬಾರಿ ಪ್ರತಿಪಾದಿಸಲಾಗಿದೆ. ಹೀಗಿದ್ದೂ ಸಮಸ್ಯೆ ಇತ್ಯರ್ಥವಾಗಿಲ್ಲ . ಸತ್ಯದ ಅನ್ವೇಷಣೆ ,ಅವಲೋಕನ ದೃಷ್ಟಿಯಿಂದ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸಿ.ಟಿ. ರವಿ ಒತ್ತಾಯಿಸಿದರು.
ಪೀಠದಲ್ಲಿ ಪೂಜಾ ವಿಧಿ ವಿಧಾನಗಳು ಹೇಗೆ ನಡೆಯಬೇಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅದಕ್ಕೆ ಅನುಗುಣವಾಗಿ ನಡೆಯಬೇಕೆ ಹೊರತು ಅಡಚಣೆಗಳು ಸಲ್ಲದು ಎಂದರು.
ಕುರ್ಚಿ ಕದನ ಬಿಡಿ: ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕುರ್ಚಿ ಕದನ ಪ್ರಸ್ತಾಪಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ನೀಡುವಂತೆ ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕುರ್ಚಿ ಸಮಸ್ಯೆ ಪ್ರಮುಖ ಚರ್ಚೆಯ ವಿಷಯವಾಗಬಾರದು. ವೈದ್ಯರೇ ಭಯೋತ್ಪಾದಕರಾಗಿರುವ ಭಯಾನಕ ಸಂಗತಿ ಸೇರಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದರು.
