ಚಿಕ್ಕಮಗಳೂರು: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಬೆಳ್ಳಿಗ್ಗೆ ಚುಮುಚುಮು ಚಳಿ ಶುರುವಾಗಿದೆ. ಕಾಡುತ್ತಿರುವ ಚಳಿಗೆ ಗಂಟೆಗೊಂದು ಕಪ್ ಕಾಫಿ ಕುಡಿಯಬೇಕೆಂಬ ಆಸೆಯಾಗುತ್ತೆ. ಆದ್ರೆ ಈ ಬಿಸಿ ಕಾಫಿ ನಿಮ್ಮ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ ಯಾಕಂದ್ರೆ, ಒಂದು ಕೆ.ಜಿ ಕಾಫಿ ಪುಡಿಗೆ 800-1200 ರೂ.ಗೆ ಏರಿಕೆಯಾಗಿದೆ. ಇದರಿಂದ ಕಾಫಿ ಪ್ರಿಯರು ಮತ್ತು ಹೋಟೆಲ್ ಮಾಲೀಕರಿಗೆ ಬಿಸಿ ತಟ್ಟಲಿದೆ.
ಹೌದು, ಕಾಫಿ ಪುಡಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮುಂದಿನ ತಿಂಗಳು ಮತ್ತೆ ಕೆ.ಜಿಗೆ 200 ರೂ.ವರೆಗೂ ಬೆಲೆ ಏರಿಕೆ ಸಾಧ್ಯತೆ ಇದೆ. 2022 ರಲ್ಲಿ ಕೆ.ಜಿಗೆ 300-400 ರೂ. ಇದ್ದ ಕಾಫಿಪುಡಿ ಬೆಲೆ ಇದೀಗ 1200 ರೂ.ವರೆಗೂ ಏರಿಕೆಯಾಗಿದೆ. ಕಳೆದ ಒಂದೇ ವರ್ಷದಲ್ಲಿ ಕೆ.ಜಿ ಕಾಫಿ ಪುಡಿ ಬೆಲೆ 200 ರೂ. ಹೆಚ್ಚಳವಾಗಿದೆ. ಇದ್ರಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಇನ್ನೂ ತಕ್ಷಣವೇ ಕಾಫಿ ಬೆಲೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.
ಕಾಫಿ ಅತಿ ಹೆಚ್ಚು ಬೆಳೆಯುವ ಬ್ರೇಜಿಲ್, ವಿಯಟ್ನಾಂನಲ್ಲಿ ಬೆಳೆ ಕುಂಠಿತವಾಗಿದ್ದು ಹಾಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಇಳುವರಿ ಕೂಡ ಕಡಿಮೆಯಾಗಿದೆ.ಈ ದಿಡೀರ್ ಬೆಲೆ ಏರಿಕೆಯಿಂದ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ. ಇನ್ನೂ ಮುಂದಿನ ದಿನಗಳಲ್ಲಿ ದಕ್ಕಿಂತ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
