ಮೂಡಿಗೆರೆ: ರಾಜ್ಯದ ಜನಸಂಖ್ಯೆಯಲ್ಲಿ ದಲಿತ ಸಮುದಾಯವು ದೊಡ್ಡ ಮಟ್ಟದಲ್ಲಿದ್ದರೂ, ರಾಜಕಾರಣದಲ್ಲಿ ಕೇವಲ ಮತ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿರುವುದು ಬೇಸರದ ಸಂಗತಿ. ಈವರೆಗೆ ಛಲವಾದಿ ಬಲಗೈ ಸಮುದಾಯದವರು ಮುಖ್ಯಮಂತ್ರಿಯಾಗದಿರುವುದು ನೋವಿನ ವಿಚಾರವಾಗಿದ್ದು, ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಬಾರಿ ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮೂಡಿಗೆರೆ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ ಒತ್ತಾಯಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. ಆದರೆ, ಪ್ರತಿ ಬಾರಿ ಬಹುಮತ ಬಂದ ಸಂದರ್ಭದಲ್ಲೂ ದಲಿತ ನಾಯಕರಿಗೆ ವಂಚಿಸುತ್ತಾ ಬರಲಾಗಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಕೇವಲ ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ನಾಯಕರು ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೂ ಅಧಿಕಾರಕ್ಕೆ ಬಂದಾಗ ರಾಜಕೀಯ ಕುತಂತ್ರದಿಂದಾಗಿ ದಲಿತ ಸಮುದಾಯದವರನ್ನು ಕಡೆಗಣಿಸುತ್ತಾ ಬಂದಿರುವುದು ರಾಜಕೀಯ ದುರಂತ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿಯಾದರೂ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು ಎಂದು ಅವರು ಪ್ರಬಲವಾಗಿ ಒತ್ತಾಯಿಸಿದರು.
