ಮೂಡಿಗೆರೆ :ಕೊಪ್ಪದ ಬಸರಿಕಟ್ಟೆಯಲ್ಲಿ ಅತಿಥಿ ಶಿಕ್ಷಕಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು DSS ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್ ಖಂಡಿಸಿದ್ದಾರೆ.
ಈ ಬಗ್ಗೆ ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಬಸರಿಕಟ್ಟೆ ಸರ್ಕಾರಿ ಶಾಲೆಯ ಯುವ ಅತಿಥಿ ಶಿಕ್ಷಕಿಯ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಕ್ರೂರ ಮತ್ತು ಹೇಯ ಕೃತ್ಯ. ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿದೆ.
ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ 25 ವರ್ಷದ ಹೆಣ್ಣುಮಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಈ ಅಮಾನವೀಯ ಹಲ್ಲೆಯನ್ನು ಖಂಡಿಸಲು ಪದಗಳೇ ಸಾಲದು. ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಕೇವಲ ಆ ಶಿಕ್ಷಕಿಯ ಮೇಲಾದ ದೌರ್ಜನ್ಯವಲ್ಲ, ಇದು ಇಡೀ ಶಿಕ್ಷಕ ವೃಂದ ಮತ್ತು ಮಹಿಳಾ ಸಮುದಾಯದ ಸ್ವಾಭಿಮಾನದ ಮೇಲಾದ ನೇರ ಹಲ್ಲೆ ಎಂದಿದ್ದಾರೆ.
ಇದು ಅತ್ಯಂತ ಹೇಯ ಕೃತ್ಯ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಎಲ್ಲಿ? ಜ್ಞಾನದ ದೀಪ ಹಚ್ಚುವ ಶಿಕ್ಷಕಿಯ ಮೇಲೆಯೇ ಇಂತಹ ಕ್ರೌರ್ಯ ನಡೆದರೆ, ಸಾಮಾನ್ಯ ಮಹಿಳೆಯರ ಗತಿ ಏನು? ಈ ಘಟನೆ ಮಹಿಳೆಯರು ಎದುರಿಸುತ್ತಿರುವ ಅಸುರಕ್ಷಿತ ವಾತಾವರಣಕ್ಕೆ ಕನ್ನಡಿ ಹಿಡಿದಿದ್ದು , ಅತಿಥಿ ಶಿಕ್ಷಕಿಯ ಮೇಲೆ ನಡೆದಿರುವ ಈ ದಾಳಿ ಆಕೆಯ ಶೀಲ ಮತ್ತು ಘನತೆ ಎರಡಕ್ಕೂ ಧಕ್ಕೆಯಾಗಿದೆ ಎಂದಿದ್ದಾರೆ.
“ಕೇವಲ ಒಬ್ಬ ಆರೋಪಿಯನ್ನು ಬಂಧಿಸಿ ಸುಮ್ಮನಾಗದೆ, ಘಟನೆಯ ಹಿಂದಿನ ಪೂರ್ಣ ಕಾರಣಗಳು, ದುಷ್ಕರ್ಮಿಗಳ ನಿಜವಾದ ಉದ್ದೇಶ ಮತ್ತು ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಶಿಕ್ಷಕಿಗೆ ಸೂಕ್ತವಾದ ಪರಿಹಾರ ಮತ್ತು ವೈದ್ಯಕೀಯ ನೆರವನ್ನು ಸರ್ಕಾರ ಕೂಡಲೇ ಒದಗಿಸಬೇಕು. ನಮ್ಮ ಸಂಘಟನೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂತ್ರಸ್ತೆಯ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲಿದೆ . ಉಳಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
