Tuesday, February 10, 2026
Homeಆಧ್ಯಾತ್ಮಬೇಲೂರಿನಲ್ಲಿ ಅದ್ದೂರಿ ಹನುಮ ಜಯಂತೋತ್ಸವ; ವೀರಾಂಜನೇಯ ಸ್ವಾಮಿ ಶೋಭಾಯಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿ

ಬೇಲೂರಿನಲ್ಲಿ ಅದ್ದೂರಿ ಹನುಮ ಜಯಂತೋತ್ಸವ; ವೀರಾಂಜನೇಯ ಸ್ವಾಮಿ ಶೋಭಾಯಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿ

ಬೇಲೂರು: ಹಾಸನ ಜಿಲ್ಲೆಯ ಬೇಲೂರಿನ ಲಕ್ಷ್ಮೀಪುರ ಬಡಾವಣೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲದ 12ನೇ ವಾರ್ಷಿಕೋತ್ಸವ, ಹನುಮ ಜಯಂತಿ ಹಾಗೂ ಶೋಭಾಯಾತ್ರೆಯು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು.

ದಿನವಿಡೀ ದೇಗುಲದಲ್ಲಿ ಮಹಾ ಅಭಿಷೇಕ, ವಿಶೇಷ ಅಲಂಕಾರ, ಸಪರಿವಾರ ರಾಮತಾರಕ ಹವನ, ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೋಳೆಬೀದಿಯ ಆಂಜನೇಯ ದೇಗುಲದ ಬಳಿ ಟ್ರಸ್ಟ್ ಅಧ್ಯಕ್ಷ ಬಿ.ಗಿರೀಶ್ ನೇತೃತ್ವದಲ್ಲಿ ಭಕ್ತರಿಗೆ ಅನ್ನಸಂಪರ್ಪಣೆ ನಡೆಯಿತು.

ಮಧ್ಯಾಹ್ನದ ವೇಳೆಗೆ ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿದ್ದ ಮಂಟಪದಲ್ಲಿ ವೀರಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ, ಈ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯ ವೇಳೆ ಉತ್ಸವ ಮೂರ್ತಿಗೆ ಸೇಬು, ಡ್ರೈ ಫ್ರೂಟ್ಸ್ ಮತ್ತು ಹಣದ ಹಾರಗಳನ್ನು ಹಾಕಿ ಭಕ್ತಿ ಸಮರ್ಪಿಸಿದರು. ನೂರಾರು ಯುವಕರು ಮತ್ತು ಭಕ್ತರು ತಮ್ಮ ವಾಹನಗಳಿಗೆ ಹನುಮ ಧ್ವಜವನ್ನು ಅಳವಡಿಸಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಶ್ರೀರಾಮನ ಸ್ತಬ್ಧಚಿತ್ರವೂ ಈ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಡಿ.ಜೆ. ಸದ್ದು, ವಿವಿಧ ವಾದ್ಯ ಹಾಗೂ ಡೋಲುಗಳ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಇದಕ್ಕಾಗಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯಿಂದ ಆಗಮಿಸಿದ್ದ 30 ಮಕ್ಕಳು ಭಜನೆಯೊಂದಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ಆಕರ್ಷಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಮೊಹಮ್ಮದ್ ಸುಜೀತಾ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರು, ಬೇಲೂರಿನ ಜನತೆ ಸಂಭ್ರಮದಿಂದ ಹನುಮ ಜಯಂತಿ ಆಚರಿಸುತ್ತಿದ್ದು, ಆಂಜನೇಯ ಸ್ವಾಮಿ ಕ್ಷೇತ್ರದ ಹಾಗೂ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಹಾರೈಸಿದರು. ವೀರಾಂಜನೇಯಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಮೋಹನ್ ಅವರು ಭಕ್ತರ ಸಹಕಾರದಿಂದ ಹನುಮ ಜಯಂತಿ ಅದ್ದೂರಿಯಾಗಿ ನಡೆದಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!