Wednesday, February 25, 2026
Homeಕ್ರೈಮ್ಹಾಸನ: ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಮಹಿಳೆ ಸಾವು: ಕುಟುಂಬಸ್ಥರ ಆಕ್ರೋಶ

ಹಾಸನ: ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಮಹಿಳೆ ಸಾವು: ಕುಟುಂಬಸ್ಥರ ಆಕ್ರೋಶ

ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃಪಟ್ಟ ಘಟನೆ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿ ಮೃತಳ ಸಂಬಂಧಿಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಹಾಸನ ತಾಲ್ಲೂಕಿನ ಹನುಮನಹಳ್ಳಿ ನಿವಾಸಿ, ಕೆ.ಆರ್. ಪೇಟೆ ಸಮೀಪದ ಚಿಕ್ಕಗಾಡೆನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿ ಕೃತಿ (30) ಮೃಪಟ್ಟ ದುರ್ದೈವಿ. ಇವರು ಕೆ.ಆರ್. ಪೇಟೆ ಡಿಪೋದಲ್ಲಿ ಬಸ್ ಚಾಲಕರಾಗಿರುವ ಪುನೀತ್ ಅವರ ಪತ್ನಿ.

ಫೆಬ್ರವರಿ 22ರಂದು ಹೆರಿಗೆಗಾಗಿ ‘ಕೃತಿ’ ಅವರನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಅವರು ಸುಸೂತ್ರವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹೆರಿಗೆಯ ನಂತರ ‘ಕೃತಿ’ ಅವರ ಆರೋಗ್ಯ ಏಕಾಏಕಿ ಕ್ಷೀಣಿಸಿದೆ.

​ಕೃತಿ ಅವರ ಸ್ಥಿತಿ ಹದಗೆಟ್ಟಾಗ ತಕ್ಷಣ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದರು. ಕುಟುಂಬಸ್ಥರು ಕೂಡಲೇ ರಕ್ತದ ವ್ಯವಸ್ಥೆ ಮಾಡಿದ್ದರೂ ಸಹ, ವೈದ್ಯರು ಸಕಾಲದಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಪತಿ ಪುನೀತ್ ಅವರ ದೂರು. ​”ಪ್ರಸೂತಿ ತಜ್ಞೆ ಡಾ. ಸುಮಾ ಅವರೇ ಹೆರಿಗೆ ಮಾಡಿಸಿದ್ದರು. ಆದರೆ ನಂತರದ ಚಿಕಿತ್ಸೆಯಲ್ಲಿ ವಿಳಂಬ ಮಾಡಲಾಯಿತು. ಪರಿಸ್ಥಿತಿ ಕೈಮೀರಿದಾಗ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಮಾರ್ಗಮಧ್ಯೆಯೇ ‘ ಕೃತಿ ‘ ಪ್ರಾಣ ಬಿಟ್ಟಿದ್ದಾರೆ,” ಎಂದು ಕುಟುಂಬಸ್ಥರು ಆಕ್ರೋ*ಶ ವ್ಯಕ್ತಪಡಿಸಿದ್ದಾರೆ.

ತಾಯಿಯ ಸಾವಿನಿಂದ ಆಘಾತಕ್ಕೊಳಗಾದ ಸಂಬಂಧಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸದ್ಯ ನವಜಾತ ಹೆಣ್ಣು ಮಗು ಹಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.


​ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!