Friday, October 16, 2026
Homeಜಿಲ್ಲಾಸುದ್ದಿHassan DC-SP: ಹಾಸನಾಂಬೆ ದರ್ಶನೋತ್ಸವ ಟೈಮಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ ಎಸ್ಪಿ!

Hassan DC-SP: ಹಾಸನಾಂಬೆ ದರ್ಶನೋತ್ಸವ ಟೈಮಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ ಎಸ್ಪಿ!

Telegram Group
Join Now

ಹಾಸನ: ಇತ್ತೀಚೆಗೆ ವಿವಾದದ ಕೇಂದ್ರವಾಗಿದ್ದ ಹಾಸನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದೀಗ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ನಡೆದ ಸಭೆಯ ಬಳಿಕ ಇಬ್ಬರೂ ಅಧಿಕಾರಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಹಾಸನಾಂಬೆ ದೇವಿಯ ದರ್ಶನೋತ್ಸವದ ಸಿದ್ಧತೆಗಳ ಪರಿಶೀಲನೆಗಾಗಿ ದೇವಾಲಯದ ಸಮೀಪಕ್ಕೆ ಜೊತೆಯಾಗಿ ಆಗಮಿಸಿದ ಡಿಸಿ ಮತ್ತು ಎಸ್ಪಿ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು.

ಬಳಿಕ ಆತ್ಮೀಯವಾಗಿ ಆಲಿಂಗನ ಮಾಡಿಕೊಳ್ಳುವ ಮೂಲಕ ತಮ್ಮ ನಡುವಿನ ಸಮನ್ವಯದ ಸಂದೇಶ ಸಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದರು. ಹಾಸನದ ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಎಸ್ಪಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದರಿಂದ ವಿವಾದ ಉಂಟಾಗಿತ್ತು.

ಜಿಲ್ಲಾಧಿಕಾರಿಯ ಕ್ರಮ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಮಧ್ಯಪ್ರವೇಶಿಸಿ ಇಬ್ಬರೂ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವಂತೆ ಸೂಚಿಸಿದ್ದರು.

ಇಂದು ಇಬ್ಬರೂ ಅಧಿಕಾರಿಗಳು ಒಟ್ಟಾಗಿ ಹಾಸನಾಂಬೆ ದೇವಿಗೆ ಪೂಜೆ ಸಲ್ಲಿಸಿದರು. ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಲು ಜಿಲ್ಲಾಧಿಕಾರಿಗೆ ಎಸ್ಪಿ ಹಣ ನೀಡಿದ ಪ್ರಸಂಗವೂ ಗಮನ ಸೆಳೆಯಿತು.

ಇದೇ ವೇಳೆ, ಹಾಸನಾಂಬೆ ದರ್ಶನೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿ ಎಸ್ಪಿಗೆ ಮಾಹಿತಿ ನೀಡಿದರು.

ಒಟ್ಟಿನಲ್ಲಿ, ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಾಸನಾಂಬೆ ದರ್ಶನೋತ್ಸವವನ್ನು ಯಶಸ್ವಿಯಾಗಿ ನಡೆಸಲು ಇಬ್ಬರೂ ಅಧಿಕಾರಿಗಳು ಕೈಜೋಡಿಸಿರುವುದು ಗಮನ ಸೆಳೆದಿದೆ.

ಪ್ರದೀಪ್ ಬಾಳ್ಳುಪೇಟೆ, ಪಬ್ಲಿಕ್ ಇಂಪ್ಯಾಕ್ಟ್, ಹಾಸನ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!