ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ದೇವಿ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

ಅ.9 ರಂದು ಹಾಸನಾಂಬ ದೇಗುಲದ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಸಾರ್ವಜನಿಕರ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಪೂರ್ವ ತಯಾರಿಯೊಂದಿಗೆ ಭರದಿಂದ ಸಿದ್ಧತೆ ಸಾಗಿದೆ.

ಈಗಾಗಲೇ ದೇವಸ್ಥಾನಕ್ಕೆ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡು, ಆಹ್ವಾನ ಪತ್ರಿಕೆಗಳ ಹಂಚಿಕೆ ಕಾರ್ಯವೂ ನಡೆಯುತ್ತಿದೆ. ಹಾಸನ ನಗರದ ಹಲವೆಡೆ ಸ್ವಾಗತ ಕಮಾನು, ಇಡೀ ನಗರದಾದ್ಯಂತ ಲೈಟಿಂಗ್, ಎಲ್ಇಡಿ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ಕಾರ್ಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬ್ಯಾರಿಕೇಡ್, ಮ್ಯಾಟ್ ಸೇರಿದಂತೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ.

ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ತೊಂದರೆಯಾಗದಂತೆ ಫ್ಯಾನ್, ಗರ್ಭಗುಡಿ ಮುಂಭಾಗ ಎಸಿ, ಭಕ್ತರಿಗೆ ಕುಡಿಯಲು ನೀರು ಮತ್ತು ಮಜ್ಜಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ದೇವಾಲಯದ ಒಳಗೆ ಮತ್ತು ಹೊರಗೆ ಆಕರ್ಷಣಿಯವಾಗಿ ಮತ್ತು ವಿಭಿನ್ನವಾಗಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಅ.9 ಅಂದರೆ ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಮೊದಲ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಾಗಿಲು ತೆರೆದ ನಂತರ ಗರ್ಭಗುಡಿ ಸ್ವಚ್ಛತಾ ಮಾಡಲಾಗುವುದು. ಮಾರನೇ ಬೆಳಿಗ್ಗೆ 5 ಗಂಟೆಯಿಂದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
