ಹಾಸನ: ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರ ಪ್ರಯಾಣಿಕರ ಸಂಕಷ್ಟ, ಗೋಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮಳೆಗಾಲದಲ್ಲಿ ಭೂ ಕುಸಿತದ ಭಯ, ಬೇಸಿಗೆಯಲ್ಲಿ ಹೊಂಡ ಗುಂಡಿಗಳ ಆತಂಕ. ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ. ಇದರಿಂದಾಗಿ ಧೂಳುಮಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ, ನಿತ್ಯವೂ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಾಹನಗಳು ಸಂಚರಿಸುವ ರಾಜ್ಯದ ಜೀವನಾಡಿ ರಸ್ತೆ ಎಂದೇ ಕರೆಸಿಕೊಳ್ಳುವ ಶಿರಾಡಿ ಘಾಟ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.
ಹಾಸನದಿಂದ ಬೆಂಗಳೂರು ನಡುವಿನ ಚತುಷ್ಪತ ರಸ್ತೆ ಕಾಮಗಾರಿ ಮುಗಿದು ದಶಕವೇ ಕಳೆದಿದೆ. ಆದರೆ, ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್ ವ್ಯಾಪ್ತಿಯ ಮಾರನಹಳ್ಳಿವರೆಗಿನ 45 ಕಿಲೋಮೀಟರ್ ರಸ್ತೆ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಹಾಸನದಿಂದ ಸಕಲೇಶಪುರದ ವರೆಗಿನ ಕಾಮಗಾರಿ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಕಾಮಗಾರಿಗೆ ನೂರೆಂಟು ವಿಘ್ನಗಳು. ಮಳೆಗಾಲದಲ್ಲಿ ಮಳೆ ನೆಪವೊಡ್ಡಿ ಕಾಮಗಾರಿ ವಿಳಂಬಮಾಡುವ ಅಧಿಕಾರಿಗಳು ಮಳೆ ನಿಂತ ಮೇಲಾದರೂ ಕಾಮಗಾರಿ ಚುರುಗೊಳಿಸುತ್ತಿಲ್ಲ. ಸದ್ಯ ಈಗಲೂ ಅಲ್ಲಲ್ಲಿ ಸ್ವಲ್ಪ ಕಾಮಗಾರಿ ನಡೆಯುತ್ತಿದೆ. ದೊಡ್ಡ ದೊಡ್ಡ ಹೊಂಡ ಗುಂಡಿಗಳ ನಡುವೆ ಸವಾರರು ಪರದಾಡುತ್ತಾ ಧೂಳುಮಯವಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
