Wednesday, March 25, 2026
Homeಜಿಲ್ಲಾಸುದ್ದಿಸರ್ಫೆಸಿ(SARFAESI) ಕಾಯ್ದೆ ಸಂಕಷ್ಟ: ದೆಹಲಿಗೆ ನಿಯೋಗ ಬನ್ನಿ ಎಂದು ಕಾಫಿ ಬೆಳೆಗಾರರಿಗೆ ಹೆಚ್.ಡಿ. ಕುಮಾರಸ್ವಾಮಿ ಕರೆ

ಸರ್ಫೆಸಿ(SARFAESI) ಕಾಯ್ದೆ ಸಂಕಷ್ಟ: ದೆಹಲಿಗೆ ನಿಯೋಗ ಬನ್ನಿ ಎಂದು ಕಾಫಿ ಬೆಳೆಗಾರರಿಗೆ ಹೆಚ್.ಡಿ. ಕುಮಾರಸ್ವಾಮಿ ಕರೆ

ಚಿಕ್ಕಮಗಳೂರು: ಕಾಫಿ ನಾಡಿನ ಬೆಳೆಗಾರರನ್ನು ಕಂಗಾಲು ಮಾಡಿರುವ ‘ಸರ್ಫೆಸಿ’ (SARFAESI) ಕಾಯ್ದೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನವದೆಹಲಿಗೆ ನಿಯೋಗ ಬರುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಾಳೆಹೊನ್ನೂರಿನಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ (CCRI) ಶತಮಾನೋತ್ಸವ ಸಮಾರಂಭದಲ್ಲಿ ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಸರ್ಫೆಸಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಬೆಂಬಲ

2002ರಲ್ಲಿ ಜಾರಿಗೆ ಬಂದ ಸರ್ಫೆಸಿ ಕಾಯ್ದೆಯು ಕಾಫಿ ಬೆಳೆಗಾರರಿಗೆ ಮರಣಶಾಸನವಾಗಿದೆ ಎಂಬ ಬೆಳೆಗಾರರ ಅಹವಾಲಿಗೆ ಸ್ಪಂದಿಸಿದ ಸಚಿವರು, “ಈ ಕಾಯ್ದೆಯ ಬಗ್ಗೆ ನನಗೆ ಪೂರ್ಣ ಮಾಹಿತಿ ಇರಲಿಲ್ಲ. ದಾರಿಯಲ್ಲಿ ಯುವಕನೊಬ್ಬ ನನ್ನ ವಾಹನ ನಿಲ್ಲಿಸಿ ಇದರ ಕರಾಳತೆಯ ಬಗ್ಗೆ ವಿವರಿಸಿದಾಗ ಇದರ ಗಂಭೀರತೆ ಅರಿವಾಯಿತು. ಬೆಳೆಗಾರರು ಸಾಲದ ಕಂತು ಪಾವತಿಸದಿದ್ದರೆ ಅನಾಮಿಕರು ಬಂದು ಬೆಳೆಗಾರರ ಭೂಮಿಯನ್ನು ಹರಾಜಿನಲ್ಲಿ ಪಡೆಯುತ್ತಿರುವುದು ಆತಂಕಕಾರಿ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ನಾನು ಅವಕಾಶ ಕೊಡಿಸುತ್ತೇನೆ, ನಾವೆಲ್ಲರೂ ಸೇರಿ ಅವರಿಗೆ ಮನವಿ ಮಾಡೋಣ” ಎಂದು ಭರವಸೆ ನೀಡಿದರು.

ಹಾಸನದಲ್ಲಿ ಕಾಫಿ ತ್ಯಾಜ್ಯ ರಸಗೊಬ್ಬರ ಘಟಕ ಸ್ಥಾಪನೆ

ಹಾಸನ ಜಿಲ್ಲೆಯ ಬೆಳೆಗಾರರ ದೀರ್ಘಕಾಲದ ಬೇಡಿಕೆಯಾದ ‘ಕಾಫಿ ತ್ಯಾಜ್ಯದಿಂದ ರಸಗೊಬ್ಬರ ತಯಾರಿಸುವ ಬೃಹತ್ ಘಟಕ’ ಸ್ಥಾಪನೆಗೆ ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

  • ಹಾಸನವೇ ಸೂಕ್ತ: ಹಾಸನಕ್ಕೆ ಉತ್ತಮ ಹೆದ್ದಾರಿ, ರೈಲ್ವೆ ಸಂಪರ್ಕವಿದೆ ಮತ್ತು ಶೀಘ್ರದಲ್ಲೇ ವಿಮಾನ ನಿಲ್ದಾಣವೂ ಕಾರ್ಯಾರಂಭ ಮಾಡಲಿದೆ. ಹೀಗಾಗಿ ಕಾರ್ಖಾನೆ ಸ್ಥಾಪನೆಗೆ ಹಾಸನವೇ ಸೂಕ್ತ ಜಾಗ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಈ ಯೋಜನೆಯ ಕುರಿತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧವೂ ದೆಹಲಿಗೆ ನಿಯೋಗ ಕರೆದೊಯ್ಯುವುದಾಗಿ ತಿಳಿಸಿದರು.

ಅರಣ್ಯ ಇಲಾಖೆ ಕಿರುಕುಳಕ್ಕೆ ಕಿವಿಮಾತು

ಒತ್ತುವರಿ ನೆಪದಲ್ಲಿ ಅರಣ್ಯ ಇಲಾಖೆಯಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆಯೂ ಬೆಳೆಗಾರರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಎರಡು ವರ್ಷ ತಾಳ್ಮೆಯಿಂದ ಇರಿ, ನಿಮ್ಮ ಸಂಕಷ್ಟಗಳಿಗೆ ಪರಿಹಾರ ನೀಡುವ ಜವಾಬ್ದಾರಿ ನನ್ನದು” ಎಂದು ಧೈರ್ಯ ತುಂಬಿದರು. ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಮತ್ತು ಶಾಶ್ವತ ಬದುಕು ನೀಡುವುದು ಮುಖ್ಯ ಎಂದರು. ವನ್ಯಜೀವಿ ಮತ್ತು ಮಾನವ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಕಾಫಿ ಬೆಳೆಗಾರರು ತೋಟಗಳಿಗೆ ಹೋಗಲು ಭಯಪಡುವ ಸ್ಥಿತಿ ಕೆಲವು ಕಡೆ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ತಪ್ಪಿಸಲು ರೈಲು ಹಳಿ ತಡೆಗೋಡೆ ನಿರ್ಮಿಸಲು ಚಾಲನೆ ನೀಡಿದ್ದೆ. ಈ ಯೋಜನೆ ನಿಂತು ಹೋಗಿದ್ದು, ಇದಕ್ಕೆ ಮರುಚಾಲನೆ ನೀಡಿ ರೈತರ ಸುರಕ್ಷತೆಗೆ ಗಮನ ಹರಿಸಲಾಗುವುದು ಎಂದರು.

ಕ್ರೆಡಿಲ್ (KeRDL) ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ. ರಾಜೇಗೌಡ ಮಾತನಾಡಿ, ಬಾಬಾಬುಡನ್ ಎಂಬ ಸಂತರು ವಿದೇಶದಿಂದ ತಂದ ಕಾಫಿ ಬೀಜ ಇಂದು ಹಲವು ಬೆಳೆಗಾರರ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿ, ಉದ್ಯಮ ಸ್ವರೂಪ ಪಡೆದುಕೊಂಡಿದೆ. ಕಾಫಿ ಉದ್ಯಮ ಪ್ರಪಂಚದ ಗಮನ ಸೆಳೆಯಬೇಕಾಗಿದೆ. ಕಾಫಿ ಅಂಗಡಿಯವರು ನಡೆಸುವ ನೆಮ್ಮದಿಯ ಜೀವನವನ್ನು ಬೆಳೆಗಾರರು ನಡೆಸಲಾಗುತ್ತಿಲ್ಲ. ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಕಾಫಿ ಬೆಳೆಗೆ ಸಮಸ್ಯೆಯಾಗಿ ಕಾಣುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಕಾಫಿ ತೋಟಕ್ಕೆ ಹೋಗಲು ಈಗ ಭಯವಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ಬೆಳೆಗಾರರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಸರ್ಫೆಸಿ (SARFAESI) ಕಾಯ್ದೆಯು ಕಾಫಿ ಬೆಳೆಗಾರರಿಗೆ ಮಾರಕವಾಗಿದೆ. ಕಾಫಿ ಬೆಳೆ ಪ್ರಕೃತಿ ಹಾಗೂ ಮಾರುಕಟ್ಟೆ ಬೆಲೆಯನ್ನು ಅವಲಂಬಿಸಿದೆ. ಬೆಳೆ ನಷ್ಟದಿಂದ ರೈತರು ಕೆಲವು ಸಾಲದ ಕಂತುಗಳನ್ನು ಕಟ್ಟದಿರಬಹುದು. ಅಂತಹ ಸಮಯದಲ್ಲಿ ಈ ಕಾಯ್ದೆಯ ಪ್ರಕಾರ ಬಾಕಿ ಉಳಿಸಿಕೊಂಡ ಬೆಳೆಗಾರರ ತೋಟಗಳನ್ನು ಬ್ಯಾಂಕ್ ಹೆಸರಿಗೆ ಮಾಡಿಸಿಕೊಂಡು ಹರಾಜು ಮಾಡಲು ಅವಕಾಶವಿದೆ. ಇದರಿಂದ ರೈತರನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ, ಕರ್ನಾಟಕದ ಕಾಫಿ ಬೆಳೆಗಾರರ ಧ್ವನಿಯಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ತೆಂಗಿನ ಮರದಂತೆ ಕಾಫಿ ಕೂಡ ಕಲ್ಪವೃಕ್ಷವಾಗಲಿದೆ. ಕಾಫಿಯಿಂದ ಜೈವಿಕ ಇಂಧನ, ಬಟ್ಟೆ ಮತ್ತಿತರ ಉಪ ಉತ್ಪನ್ನಗಳನ್ನು ತಯಾರು ಮಾಡುವ ಸಂಶೋಧನೆ ಮಾಡಲಾಗುತ್ತಿದೆ. ಸಣ್ಣ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಫಿ ಮಂಡಳಿ ಈಗ ಬೆಳೆಗಾರರ ಪರವಾಗಿ ಬದಲಾಗುತ್ತಿದೆ ಎಂದರು.

ನಾಗಾಲ್ಯಾಂಡ್ ಕಾಫಿಯನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬೆಳೆಗಾರರು ಮಾರುಕಟ್ಟೆ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಈಗ ಬೆಳೆ ಕಡಿಮೆಯಾಗುತ್ತಿದ್ದು, ಈ ಅವಕಾಶವನ್ನು ಬೆಳೆಗಾರರು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಬೇಲೂರು ಶಾಸಕ ಸುರೇಶ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಸಕಲೇಶಪುರದ ಮಾಜಿ ಶಾಸಕ ವಿಶ್ವನಾಥ್, ಸುಧಾಕರ ಶೆಟ್ಟಿ, ಕಾಫಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸೆಂಥಿಲ್‌ ಕುಮಾರ್ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!