ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಹುಲಿ ಸಂರಕ್ಷಿತ ಪ್ರದೇಶದ ,ಹೆಬ್ಬೆ ವಲಯದ ವ್ಯಾಪ್ತಿಯ ಸಂರಕ್ಷಿತ ಪ್ರದೇಶದಲ್ಲಿ ಯುವಕರ ತಂಡ ಅಕ್ರಮವಾಗಿ ಪ್ರವೇಶ ಮಾಡಿ, ಸಫಾರಿ ರೀತಿಯಲ್ಲಿ ತೆರೆದ ಖಾಸಗಿ ಜೀಪಿನಲ್ಲಿ ಕಾಡಿನಲ್ಲಿ ಸುತ್ತಾಟ ಮಾಡುತ್ತಾ ಆನೆಗಳನ್ನು ಬೆದರಿಸುವ, ರೀಲ್ಸ್ ,ಜಾಲಿ ರೈಡ್ ಮಾಡುವ ವೀಡಿಯೊಗಳು ಲಭ್ಯವಾಗಿದೆ.
ಪ್ರಭಾವಿಗಳು ತಮ್ಮ ರಾಜಕೀಯ,ಮತ್ತು ಮೇಲಧಿಕಾರಿಗಳ ಒತ್ತಡ ಬಳಸಿ ಹುಲಿ ಸಂರಕ್ಷಿತ ಕೋರ್ ಪ್ರದೇಶದಲ್ಲಿ ತಮ್ಮ ಖಾಸಗಿ ತೆರೆದ ಜೀಪ್ ತೆಗೆದುಕೊಂಡು ಕಾಡು ಸುತ್ತಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗಿದೆ.ಜೊತೆ ವನ್ಯಜೀವಿಗಳ ನೆಮ್ಮದಿಯ ಬದುಕಿಗೆ ದಕ್ಕೆ ಉಂಟಾಗುತ್ತಿದೆ.ಜೊತೆಗೆ ಯುವಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.ಸ್ನೇಹಿತರ ಗುಂಪು ಸೇರಿಕೊಂಡು ತೆರೆದ ಜೀಪ್ ನಲ್ಲಿ ವಿಡಿಯೋ, ರೀಲ್ಸ್ ಮಾಡುತ್ತಾ ಮೋಜು ಮಸ್ತಿ ಮಾಡಿರುವುದು,ಕೂಗಾಟ ಕಿರುಚಾಟ ಜೊತೆಗೆ ಪಾರ್ಟಿ ಮೂಡಿನಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಿರುಗುತ್ತಿರುವುದು ಕಂಡುಬಂದಿದೆ.
ಇಲಾಖೆ ನಿರ್ಲಕ್ಷ:
ಹೆಬ್ಬೆ ವಲಯ ವಿಶಾಲವಾಗಿ ಹಿನ್ನೀರು ಪ್ರದೇಶವಿದ್ದು ಇಲ್ಲಿ ಬೇಸಿಗೆ ಕಾಲದಲ್ಲಿ ಆನೆಗಳು ಹೆಚ್ಚಾಗಿ ಕಂಡುಬರುತ್ತವೆ, ಇಲ್ಲಿ ಅಕ್ರಮ ಪ್ರವೇಶ ಮಾಡಿದ ಯುವಕರ ತಂಡ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಭಯವಿಲ್ಲದೆ ಸುತ್ತಿದ್ದಾರೆ.ಇಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲವಾ ಎನ್ನುವುದು ಅನುಮಾನ ,ಅವರೇ ಇದಕ್ಕೆ ಅವಕಾಶ ಕೊಟ್ಟಿದ್ದರಾ ಎಂಬುವುದು ತನಿಖೆ ಆಗಬೇಕು,ಕೂಡಲೇ ಈ ಯುವಕರ ಜೀಪ್ ವಶಕ್ಕೆ ಪಡೆದು,ಯುವಕರ ತಂಡದ ಮೇಲೆ ಕೇಸ್ ದಾಖಲಿಸಿ ಇವರಿಗೆ ಸರಿಯಾದ ಶಿಕ್ಷೆ ಕೊಡಬೇಕು ಎಂದು ಪರಿಸರವಾದಿಗಳು ಒತ್ತಾಯ ಮಾಡಿದ್ದಾರೆ.
