ಜಯಪುರ: ಜನವಿರೋದಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅರಣ್ಯ ನೀತಿಯಿಂದಾಗಿ ಮಲೆನಾಡಿನ ರೈತರ ಬದುಕು ಬೀದಿಗೆ ಬೀಳುವ ಆತಂಕ ಎದುರಾಗಿದ್ದು, ಆನೆ, ಕಾಡು ಕೋಣಗಳ ದಾಳಿಯಿಂದ ಹತ್ತಾರು ರೈತರು, ರೈತ ಕಾರ್ಮಿಕರು ಸಾವನ್ನಪ್ಪಿದ್ದರೂ, ನಮ್ಮನ್ನಾಳುವ ಕೆಲ ರಾಜಕಾರಣಿಗಳು, ಅಧಿಕಾರಿಗಳು ವಿದೇಶಿ ಎನ್ ಜಿ ಓ ಗಳ ಕಾಸಿಗೆ ಕೈಯೊಡ್ಡಿ ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದರು.
ಜಯಪುರದಲ್ಲಿ ಮಂಗಳವಾರ ನಡೆದ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಜನ ಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಡುಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಮಿತಿ ಮೀರಿದ್ದು, ಆನೆಗಳು, ಕಾಡು ಕೋಣಗಳು, ಚಿರತೆಗಳು ನಾಡಿಗೆ ಬಂದು ರೈತರನ್ನು, ಕಾರ್ಮಿಕರನ್ನು ಬಲಿ ಪಡೆಯುತ್ತಿದ್ದರೆ, ಮಂಗಗಳು, ನವಿಲು, ಕಾಡು ಹಂದಿಗಳು ಸೇರಿದಂತೆ ಇತರೆ ಪ್ರಾಣಿಗಳು ರೈತರ ಬೆಳೆಗಳನ್ನು ಬಲಿ ಪಡೆಯುತ್ತಿವೆ. ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಇರುವಾಗ ಇನ್ನೊಂದೆಡೆ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿರುವ ಹಾಗೂ ಮನೆಗಳನ್ನು ನಿರ್ಮಿಸಿ ಕೊಂಡಿರುವ ನಾಗರೀಕರನ್ನು ಒತ್ತುವರಿದಾರರು ಎಂಬ ಹಣೆ ಪಟ್ಟಿ ಕಟ್ಟಿ ,ತೆರವಿಗೆ ಅರಣ್ಯ ಇಲಾಖೆ ದಾಖಲೆಗಳನ್ನು ಸಂಗ್ರಹಿಸಿ ಗುಪ್ತವಾಗಿ ಕಾನೂನಾತ್ಮಕವಾಗಿ ಕ್ರಮ ಜರುಗಿಸುವ ಕೆಲಸವನ್ನು ಮಾಡುತ್ತಿದೆ.
ಈ ಎಲ್ಲಾ ಸಮಸ್ಯೆಗಳು, ಅರಣ್ಯ ಇಲಾಖೆಯ ಕಾರ್ಯದ ಸ್ಪಷ್ಟ ತಿಳುವಳಿಕೆ ಇದ್ದಾಗಲೂ ಯಾವೊಬ್ಬ ಚುನಾಯಿತ ಪ್ರತಿನಿಧಿಯೂ ಸಮಸ್ಯೆಯ ಪರಿಹಾರಕ್ಕೆ ಗಂಭೀರ ಪ್ರಯತ್ನ ನಡೆಸುತ್ತಿಲ್ಲ. ಇದನ್ನು ನೋಡಿದಾಗ ವಿದೇಶಿಗರು ತಮ್ಮ ಹಣದಾಸೆಗಾಗಿ ಕಾರ್ಖಾನೆಗಳನ್ನು ನಡೆಸಿ ಪರಿಸರ ಮಾಲಿನ್ಯ ನಡೆಸಿ, ಭಾರತದಲ್ಲಿ ಕಾಡು ಬೆಳೆಸಿ ವಾತಾವರಣ ಸರಿಪಡಿಸುವ ಕುತಂತ್ರಕ್ಕೆ ನಮ್ಮ ಸರ್ಕಾರಗಳು ಬಲಿಯಾದ ಅನುಮಾನ ಕಾಡುತ್ತಿದೆ. ಇದರ ವಿದೇಶಿ ಎನ್ ಜಿ ಓ ಗಳ ಸಾವಿರಾರು ಕೋಟಿ ಹಣದ ವ್ಯವಹಾರವಿದ್ದು, ಮಲೆನಾಡಿನ ಜನ ಜಾಗೃತರಾಗಿ ಸಂಘಟಿತರಾಗಿ ಸಮರ್ಥ ಹೋರಾಟ ನಡೆಸದಿದ್ದರೆ ಕೆಲವೇ ವರ್ಷಗಳಲ್ಲಿ ನಮ್ಮ ಜಯಪುರ, ನಮ್ಮ ಬಾಳೆಹೊನ್ನೂರು, ನಮ್ಮ ಕೊಪ್ಪ ಪಟ್ಟಣಗಳೂ ಸೇರಿದಂತೆ ಇಡೀ ಮಲೆನಾಡು ಸಮೀಪದ ಕುದುರೆಮುಖ, ಸಮೀಪದ ಹಿಪ್ಲಾ, ಮುಂತಾದಂತಹ ಪಾಳು ಬಿದ್ದ ಪಟ್ಟಣ, ಊರುಗಳಾಗಿ, ನಮ್ಮೂರಿನ ಜನ ನಮ್ಮೂರಿನಿಂದಲೇ ಹೊರ ಹಾಕಲ್ಪಡಲಿದ್ದಾರೆ. ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿಯ ಜನಜಾಗೃತಿ ಯಾತ್ರೆ ಮತ್ತು ನಾಗರೀಕರ ಪರ ಹೋರಾಟಕ್ಕೆ ನಾವೆಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದರು.
ನಂತರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಹೊಸಳ್ಳಿ ಮಾತನಾಡಿ, ಮಲೆನಾಡಿನ ಜನರಿಗೆ ಇಲ್ಲಿನ ಗಂಭೀರ ಸಮಸ್ಯೆಗಳನ್ನು ಕಣ್ಣಮುಂದೆ ಇಟ್ಟು, ಹಾಗೂ ಮಲೆನಾಡಿನ ಇತರೆ ಭಾಗಗಳಲ್ಲಿ ಆಗುತ್ತಿರುವ ಅರಣ್ಯ ಇಲಾಖೆ ಮತ್ತು ಕಾಡು ಪ್ರಾಣಿಗಳಿಂದಾದ ಅನಾಹುತಗಳನ್ನು ವಿಡಿಯೋ ಮೂಲಕ ತೋರಿಸಿ ಜಾಗೃತಿ ಮೂಡಿಸಬೇಕು ಎಂಬ ದೃಷ್ಟಿಯಿಂದ ಈ ಜನ ಜಾಗೃತಿ ಜಾಥಾ ಆರಂಭವಾಗಿದ್ದು, ಜನ ಒಟ್ಟಾಗಬೇಕು , ಪಕ್ಷಾತೀತ ಪ್ರಬಲ ಹೋರಾಟಕ್ಕೆ ಮುಂದಾಗಲೇ ಬೇಕಿದೆ.
ನಾವಿರುವ ನಗರಗಳೇ ಸೆಕ್ಷನ್ 4(1), ಸೆಕ್ಷನ್ 17 , ಕಸ್ತೂರಿರಂಗನ್ ವರದಿಯ ಪರಿಮತಿಯಲ್ಲಿವೆ. ಇನ್ನು ಕಾಡಂಚಿನ ಹಳ್ಳಿಗಳ ಸ್ಥಿತಿ ಹೇಗಿರಬಹುದು ಊಹಿಸಿ. ಎಲ್ಲವೂ ಅರಣ್ಯಎಂದು ನಮೂದಿಸಲಾಗಿದೆ. ಆದರೂ ಜನ ಜಾಗೃತರಾಗಿಲ್ಲ , ಉತ್ತರ ಕನ್ನಡದಲ್ಲಿ ನೂರಾರು ಜನ ವಾಸವಿರುವ ಮತ್ತು ಕೃಷಿ ಮಾಡುತ್ತಿರುವ ಹಳ್ಳಿಗಳನ್ನೇ ಸಂರಕ್ಷಿತ ಅರಣ್ಯವಾಗಿಸಲಾಗಿದೆ. ಅಂತಹ ಸಂಧರ್ಭ ಇಲ್ಲಿಗೆ ಬರಲು ಬಹಳ ದಿನ ಇಲ್ಲ , ಜನ ರಾಜಕಾರಣ ಮರೆತು ಒಗ್ಗಟ್ಟಾಗಬೇಕಿದೆ. ನಮ್ಮ ಈ ಯಾತ್ರೆ ಜನವರಿ 26 ಕ್ಕೆ ಮುಗಿಯಲಿದೆ, ಆದರೆ ಈ ಅಭಿಯಾನ ನಿರಂತರವಾಗಿ ನಡೆಯಲಿದೆ , ಇದೇ ಬದ್ದತೆಯಲ್ಲೆ ನಮ್ಮ ಸಮಿತಿ ಪಕ್ಷಾತೀತವಾಗಿ ಆಳುವವರ ವಿರುದ್ದ ಹೋರಾಟ ನಡೆಸಿ ಮಲೆನಾಡಿಗರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಜನಜಾಗೃತಿ ಯಾತ್ರೆ ಹೇರೂರು, ಅತ್ತಿಕುಡಿಗೆ, ಹೆಗ್ಗಾರುಕುಡಿಗೆ, ಅಗಳಗಂಡಿ, ಗುಡ್ಡೇತೋಟ ಗ್ರಾ ಪಂ ವ್ಯಾಪ್ತಿಯಲ್ಲಿ ಸಂಚರಿಸಿತು. ಹೆಗ್ಗಾರುಕುಡಿಗೆಯಲ್ಲಿ ಮುಖಂಡರಾದ ಅತ್ತಿಕುಳಿ ಸುಂದರೇಶ್, ಹಾಗಲಗಂಚಿ ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ, ಪ್ರಮುಖರಾದ ಸಂತೋಷ್ ಮೇಗೂರು, ಚೇತನ್ ಮೆಣಸಿನ ಹಾಡ್ಯ , ಶುಭಶ್ಚಂದ್ರ ಕೊಳೆಗೋಡು, ಗುರುಪ್ರಸಾದ್ ಮೆಣಸಿನಹಾಡ್ಯ , ಗ್ರಾಮ ಪಂಚಾಯ್ತಿ ಅದ್ಯಕ್ಷ ಕರುಣಾಕರ, ಸದಸ್ಯ ಪ್ರವೀಣ್ ಮುಖಂಡರಾದ ಸುಧಾಕರ ಹಾಗೂ ಇತರರಿದ್ದರು.
ವರದಿ: ಶಶಿ ಬೆತ್ತದಕೊಳಲು
