ಚಿಕ್ಕಮಗಳೂರು: 2026-27ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಭಾರೀ ಅನುದಾನ ಹಾಗೂ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು .. ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ನೂತನ ಬಸ್ಸು ನಿಲ್ದಾಣಗಳನ್ನು ಹಾಗೂ ತರೀಕೆರೆಯಲ್ಲಿ ಬಸ್ಸು ಡಿಪೋ ಅನ್ನು ನಿರ್ಮಿಸಲಾಗುವುದು.
ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದುವರೆಗೆ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಫಲಾನುಭವಿಗಳು ಪ್ರಯಾಣ ಸೌಲಭ್ಯ ಪಡೆದಿರುತ್ತಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ 2026-27ನೇ ಸಾಲಿಗೆ 5,300 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಹಿಂದಿನ ಸರ್ಕಾರ 01.03.2023 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿದ್ದು, ಅದಕ್ಕೂ ಮೊದಲಿನ ಅವಧಿಯ ವೇತನ ಪರಿಷ್ಕರಣೆಯ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಸದರಿ ಅವಧಿಯ ವೇತನ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ 01.01.2021 ರಿಂದ 28.02.2023 ರವರೆಗಿನ ವೇತನ ಬಾಕಿಯನ್ನು ಪಾವತಿಸಲು ಹಾಗೂ 01.04.2025 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಲು ನಮ್ಮ ಸರ್ಕಾರ ನಿಶ್ಚಯಿಸಿರುತ್ತದೆ. ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮಪಡಿಸಲು 2025-26ನೇ ಸಾಲಿನಲ್ಲಿ ಘೋಷಿಸಿದ 2,000 ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದೂ ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6,596 ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿರುತ್ತದೆ. 2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ವರದಿ: ಶಾಲಿನಿ ಗೌಡ
