ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೇಗುಂದ ಹೋಬಳಿ ಘಟಕದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಪ್ರಧಾನ ಉಪನ್ಯಾಸವನ್ನು ಶ್ರೀಯುತ ಗಣೇಶ್ ಕುಂದೂರ್ ರವರು ನಡೆಸಿಕೊಟ್ಟರು. ತಮ್ಮ ಭಾಷಣದುದ್ದಕ್ಕೂ ಕನ್ನಡದ ಅಸ್ಮಿತೆ, ನಾಡು ನುಡಿ ಜಲ ಗಡಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿರುವುದು ಇಂದು ತುಂಬಾ ಅಗತ್ಯವೆಂದು ಮನಮುಟ್ಟುವಂತೆ ತಿಳಿಸಿದರು.
ಹಾಗೆ ಅವರ ಮಾತಿನ ಪ್ರಾರಂಭದಿಂದ ಅಂತ್ಯದವರೆಗೂ ಮಕ್ಕಳ ಸಾಹಿತ್ಯದ ಗಂಭೀರ ಚಿಂತನೆ ಹಾಗೂ ಇಂದು ಅದರ ಅವಶ್ಯಕತೆ ಎಷ್ಟು ಪ್ರಮುಖ ಎನ್ನುವುದರ ಕುರಿತು ಬೆಳಕು ಚೆಲ್ಲಿದರು. ತಂತ್ರಜ್ಞಾನ ಮಕ್ಕಳ ಸಾಹಿತ್ಯ ಹಾಗೂ ಓದುವಿಕೆಯನ್ನು ಕಡಿಮೆ ಮಾಡುತ್ತಿರುವುದು ನಮ್ಮೆಲ್ಲರ ದುರ್ದೈವ ಎಂದರು.

ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯುವುದು, ಜೊತೆಗೆ ಅವರಲ್ಲಿ ಆಳವಾಗಿ ಬಿತ್ತಬೇಕು ಇಲ್ಲವಾದಲ್ಲಿ ಪರಭಾಷಿಕರು ನಮ್ಮ ಮೇಲೆ ದೌರ್ಜನ್ಯ ಮಾಡುವುದು ಹೆಚ್ಚಾಗುವುದು ಎಂದು ಎಚ್ಚರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೇಗುಂದ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಾಜೇಶ್ ಚಿಮ್ಮನ ಕೂಡಿಗೆಯವರು ಮಾತನಾಡಿ ಕನ್ನಡದ ತೇರನ್ನು ಪ್ರತಿನಿತ್ಯ ಎಳೆಯಬೇಕು. ಭವಿಷ್ಯದಲ್ಲಿ ನಮ್ಮ ಭಾಷೆಗೆ ಅಪಾಯವಾಗಬಾರದೆಂದರೆ ಚಿಕ್ಕ ಮಕ್ಕಳಲ್ಲಿಂದಲೇ ಕನ್ನಡ ಪ್ರೇಮವನ್ನು ಬೆಳೆಸಬೇಕು ಮತ್ತು ಕನ್ನಡವನ್ನು ಪ್ರೀತಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಅತ್ಯುತ್ತಮವಾಗಿ ಕನ್ನಡದ ಗೀತೆಗಳನ್ನು ಹಾಡಿದ ಕುಮಾರಿ ಸಾನ್ವಿಯನ್ನು ಸಾಹಿತ್ಯ ಪರಿಷತ್ ಕಡೆಯಿಂದ ಅಭಿನಂದಿಸಲಾಯಿತು.
ಕೊನೆಯಲ್ಲಿ ಕನ್ನಡದ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ ಕಡೆಯಿಂದ ಬಹುಮಾನ ವಿತರಣೆ ಮಾಡಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ಶಿಕ್ಷಕರು ಹಾಗೂ ಬರಹಗಾರರಾದ ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ )ಯವರು ಸ್ವಾಗತಿಸಿ ನಿರೂಪಿಸಿದರೆ, ಮುಖ್ಯಗುರುಗಳಾದ ಶ್ರೀಮತಿ ಮಮತರವರು ವಂದಿಸಿದರು.
