ಕೊಟ್ಟಿಗೆಹಾರ: ಪ್ರಾಥಮಿಕ ಶಾಲೆಗಳು ಮಕ್ಕಳ ಭವಿಷ್ಯಕ್ಕೆ ಬಾಗಿಲುಗಳಾಗಿದ್ದು, ಮಕ್ಕಳ ಬದುಕಿನ ಅಡಿಪಾಯವನ್ನು ಇಲ್ಲಿಯೇ ಹಾಕಲಾಗುತ್ತದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಶನಿವಾರ ಸಂಜೆ ನಡೆದ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳಿದರು. ಮಕ್ಕಳಿಗೆ ಆಚಾರ, ನಡೆ, ನುಡಿ ಹಾಗೂ ಸಂಸ್ಕಾರ ಕಲಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಪೋಷಕರು ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಯಾವುದೇ ತಾರತಮ್ಯವಿಲ್ಲದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬೆಂಬಲ ನೀಡಬೇಕು. ಏಕಲವ್ಯ ಶಾಲೆಗಳಲ್ಲಿ ಎಸ್ಟಿ ವರ್ಗದ ಜೊತೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸಹ ಕನಿಷ್ಠ ಶೇಕಡಾವಾರು ಸೀಟು ಮೀಸಲಿಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಕೊಟ್ಟಿಗೆಹಾರವು ಕುವೆಂಪು ಹಾಗೂ ತೇಜಸ್ವಿಯ ಕನಸಿನ ‘ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿನ ಜನರು ಇಂದಿಗೂ ಯಾವುದೇ ಕೋಮು ಭಾವನೆಗೆ ಅವಕಾಶ ನೀಡದೆ ಶಾಂತಿಯುತವಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ನಾವು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭಾರತೀಯರಾಗಿ ಬದುಕಬೇಕು. ಪೋಷಕರು ಮಕ್ಕಳಲ್ಲಿ ಸೌಹಾರ್ದತೆ ಬೆಳೆಸುವಂತೆ ಪ್ರೇರೇಪಿಸಿದರೆ ಮಾತ್ರ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತನು–ಮನ–ಧನಗಳಿಂದ ಅಮೃತ ಮಹೋತ್ಸವಕ್ಕೆ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು. ಮಕ್ಕಳ ಕೊರತೆಯಿಂದ ಮುಚ್ಚುವ ಹಂತ ತಲುಪಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಪೋಷಕರಿಂದ ಮಾತ್ರ ಸಾಧ್ಯ. ಶಾಲೆಗಳಲ್ಲಿ ಲಭ್ಯವಿರುವ ಉಚಿತ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಹಾಗೆ ಅಮೃತ ಮಹೋತ್ಸವದ ಪ್ರಧಾನ ಸಂಚಾಲಕ ಬಿ.ಎಂ. ಭರತ್ ಮಾತನಾಡಿ, ಅತ್ತಿಗೆರೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ತಾನು ಎರಡು ಬಾರಿ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿರುವುದು ಶಾಲೆಯ ಕೊಡುಗೆ ಎಂದು ಹೇಳಿದರು. ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರು ಶ್ರದ್ಧೆಯಿಂದ ಶಿಕ್ಷಣ ನೀಡುತ್ತಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ನಡೆಯಬೇಕಾಗಿದ್ದ ಇಂತಹ ಕಾರ್ಯಕ್ರಮ ಗ್ರಾಮ ಮಟ್ಟದಲ್ಲೇ ಸಂಭ್ರಮದಿಂದ ನಡೆದಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಹತ್ತಾರು ವರ್ಷಗಳ ಹಿಂದೆ ಅತ್ತಿಗೆರೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕಿಯರನ್ನು ಹಳೆಯ ವಿದ್ಯಾರ್ಥಿಗಳು ಸೇರಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಶಾಲೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಹಳೆಯ ಗುರುಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಗುರುಗಳ ಸೇವೆಯನ್ನು ನೆನಪಿಸಿಕೊಂಡು ಅನೇಕರು ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ಪದಾಧಿಕಾರಿಗಳಾದ ಟಿ.ಎಂ. ಗಜೇಂದ್ರ, ಸಂಜಯ್ ಗೌಡ, ಹಸೇನ್ ಹಾಜಿ, ನಂದೀಶ್ ಬಂಕೇನಹಳ್ಳಿ, ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎನ್. ರಘು, ಟಿ.ಸಿ. ರಮೇಶ್, ಟಿ.ಎಂ. ನರೇಂದ್ರ, ಟಿ.ಎಸ್. ಮಂಜುನಾಥ್, ಎ.ಎನ್. ಕಿರಣ್, ಅನ್ವಿತ್ ಕುಮಾರ್, ನಿವೃತ್ತ ಶಿಕ್ಷಕ ಬಲರಾಮಯ್ಯ, ನಿವೃತ್ತ ಶಿಕ್ಷಕಿ ಚಿಕ್ಕಮ್ಮ, ನಿವೃತ್ತ ಶಿಕ್ಷಕಿ ವಿ.ಡಿ. ಲಿಲ್ಲಿ, ಶಿಕ್ಷಕಿ ಭಾಗ್ಯ, ಮುಖ್ಯ ಶಿಕ್ಷಕಿ ಕೆ. ಕವಿತಾ, ಹಳೆಯ ವಿದ್ಯಾರ್ಥಿ ಟಿ.ಬಿ. ಬಸವಲಿಂಗಪ್ಪ ಶಾಲೆಯ ಕುರಿತು ಮಾತನಾಡಿದರು.
ಅಮೃತ ಮಹೋತ್ಸವದ ಸಂಚಿಕೆಯನ್ನು ನಂದೀಶ್ ಬಂಕೇನಹಳ್ಳಿ ಬಿಡುಗಡೆಗೊಳಿಸಿದರು. ಏಕಲವ್ಯ ಶಾಲೆ, ಅತ್ತಿಗೆರೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಮತ್ತು ಅವರ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಏಕಲವ್ಯ ಶಾಲೆಯ ಪ್ರಾಂಶುಪಾಲ ಸತೀಶ್ ಜೈಸ್ವಾಲ್, ಶಿಕ್ಷಕರ ಸಂಘದ ಮಂಜಪ್ಪ ಸೇರಿದಂತೆ ಶಿಕ್ಷಕರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
