ಕೊಟ್ಟಿಗೆಹಾರ: ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಧರ್ಮಸ್ಥಳ, ಉಜಿರೆ, ಮಂಗಳೂರು, ಚಿಕ್ಕಮಗಳೂರು, ಮೂಡಿಗೆರೆ, ಹೊರನಾಡು ಹಾಗೂ ಶೃಂಗೇರಿ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದ ಯಾತ್ರಿಕರ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಯಿತು.
ಕಾರ್ಯಕ್ರಮಕ್ಕೆ ತರುವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸತೀಶ್ ಗೌಡ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಪಲ್ಸ್ ಪೋಲಿಯೊ ಲಸಿಕೆ ಮಕ್ಕಳ ಭವಿಷ್ಯ ರಕ್ಷಣೆಗೆ ಅತ್ಯಂತ ಅಗತ್ಯವಾಗಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು. ಪ್ರತಿಯೊಬ್ಬ ಮಗುವಿಗೂ ಲಸಿಕೆ ಹಾಕಿಸುವುದು ಪೋಷಕರು ಹಾಗೂ ಸಮಾಜದ ಒಟ್ಟಾರೆ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪ್ರಯಾಣದಲ್ಲಿರುವ ಮಕ್ಕಳಿಗೂ ಲಸಿಕೆ ನೀಡುವ ಮೂಲಕ ಆರೋಗ್ಯ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಘು, CHO ಬಬೀತಾ, ನಿವೃತ್ತ PHCO ಮಂಜುಳಾ, ಅಂಗನವಾಡಿ ಶಿಕ್ಷಕಿಯರಾದ ಚೈತ್ರ ಹಾಗೂ ಅರ್ಚನಾ, ಆಶಾ ಕಾರ್ಯಕರ್ತೆಯರಾದ ರೇಖಾ, ಜಯಂತಿ, ಶಾರದ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ವೇಳೆ ಅಲೆಕಾನ್ ಪ್ರದೇಶದಲ್ಲಿಯೂ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂಗನವಾಡಿ ಶಿಕ್ಷಕಿ ಶ್ವೇತಾ, ಆಶಾ ಕಾರ್ಯಕರ್ತೆ ಪವಿತ್ರ ಹಾಗೂ ಸ್ವಯಂ ಸೇವಕರು ಪ್ರಮೀಳಾ ಮತ್ತು ಮಲ್ಲಿಗಮ್ಮ ಅಲೆಖಾನ್ ಅವರು ಭಾಗವಹಿಸಿದ್ದರು.
ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಮನ್ವಯ ಸಹಕಾರದಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವು ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
