ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯ ಜೀವ ತೆಗೆದಿರುವ ಘಟನೆ ಹಾಸನ ತಾಲೂಕಿನ ರಾಮದೇವರಪುರ ಗ್ರಾಮದ ಸಮೀಪ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ 29 ವರ್ಷದ ಪೃಥ್ವಿರಾಜ್ ಉಸಿರು ನಿಲ್ಲಿಸಿದ್ದಾರೆ.
ಪೃಥ್ವಿರಾಜ್ ಕೆಲವು ವರ್ಷಗಳ ಹಿಂದೆ ಸಂತೋಷ್ ಅಲಿಯಾಸ್ ಮೊಟ್ಟೆ ಸಂತೋಷ್ಗೆ ಜಮೀನಿನ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದ ಎನ್ನಲಾಗಿದೆ.
ಈ ನಡುವೆ ಸಂತೋಷ್ ಅದೇ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡುವುದಾಗಿ ಹೇಳಿ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ. ಆದರೆ ಜಮೀನು ಮಾರಾಟ ಮಾಡಲು ಪೃಥ್ವಿರಾಜ್ ನಿರಾಕರಿಸಿ, ತಾನೇ ಮರಳಿ ಖರೀದಿಸುವುದಾಗಿ ಹೇಳಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು.
ಸೇಲ್ ಅಗ್ರಿಮೆಂಟ್ ಪ್ರಕಾರ ಜಮೀನು ಮಾರಾಟ ಮಾಡಲೇಬೇಕು ಎಂದು ಸಂತೋಷ್ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಾತುಕತೆ ನಡೆಸಲು ನಿನ್ನೆ ಮಧ್ಯಾಹ್ನ ಪೃಥ್ವಿರಾಜ್ನನ್ನು ಜಮೀನಿನ ಬಳಿ ಬರುವಂತೆ ಕರೆದಿದ್ದ ಅನ್ನೋ ಮಾಹಿತಿ ಇದೆ. ಅನಾರೋಗ್ಯದ ಕಾರಣ ಪೃಥ್ವಿರಾಜ್ ಆಗ ಅಲ್ಲಿಗೆ ಹೋಗಿರಲಿಲ್ಲ.
ಆದರೆ, ನಿನ್ನೆ ಸಂಜೆ ಬೈಕ್ನಲ್ಲಿ ತೋಟಕ್ಕೆ ತೆರಳುತ್ತಿದ್ದ ಪೃಥ್ವಿರಾಜ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಜೀವ ತೆಗೆದು, ಆತನ ಮೊಬೈಲ್ ಹಾಗೂ ಬೈಕ್ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
