ಚಿಕ್ಕಮಗಳೂರು: ಆಟೋ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಪತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪತ್ನಿಯೊಬ್ಬರು ಸಾರ್ಥಕತೆ ಮೆರೆದಿರುವ ಘಟನೆ ಕೊಪ್ಪ ತಾಲೂಕಿನಲ್ಲಿನಡೆದಿದೆ.
ಕೊಪ್ಪ ತಾಲೂಕಿನ ಮಂಜುನಾಥ್ (35) ಇತ್ತೀಚೆಗೆ ಆಟೋ ಅಪಘಾತಕ್ಕೀಡಾಗಿದ್ದರು. ಈ ವೇಳೆ ಆಟೋ ತಲೆಗೆ ಬಲವಾಗಿ ಬಡಿದ ಪರಿಣಾಮ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು (Brain Dead). ಕೊಪ್ಪ ಮತ್ತು ಮಣಿಪಾಲದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ.
ತನ್ನ ಪತಿ ಇನ್ನು ಬದುಕಿ ಬರುವುದಿಲ್ಲ ಎಂಬ ಕಹಿ ಸತ್ಯ ತಿಳಿದ ಪತ್ನಿ ಅಪೂರ್ವ ಶೆಟ್ಟಿ ಅವರು, ಪತಿಯ ನೆನಪು ಮರೆಯಾಗಬಾರದು ಮತ್ತು ಅವರು ಮತ್ತೊಬ್ಬರ ದೇಹದಲ್ಲಿ ಜೀವಂತವಾಗಿರಲಿ ಎಂಬ ಉದಾತ್ತ ಉದ್ದೇಶದಿಂದ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಮಣಿಪಾಲ ಆಸ್ಪತ್ರೆಯವರು ಅಂಗಾಂಗ ದಾನ ಮಾಡಿದರೆ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದರು. ಆದರೆ, ಈ ಆಮಿಷಕ್ಕೆ ಒಳಗಾಗದ ಅಪೂರ್ವ ಅವರು, ಪತಿಯ ಚಿಕಿತ್ಸೆಯ ಸಂಪೂರ್ಣ ಹಣವನ್ನು ತಾವೇ ಭರಿಸಿ, ನಂತರ ಅಂಗಾಂಗ ದಾನದ ಪ್ರಕ್ರಿಯೆ ನಡೆಸಲು ನಿರ್ಧರಿಸಿ ಮಾನವೀಯತೆ ಮೆರೆದಿದ್ದಾರೆ
ಇಂದು ಮಧ್ಯಾಹ್ನ ಕೊಪ್ಪದ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಮಂಜುನಾಥ್ ಅವರ ಹೃದಯ, ಕಿಡ್ನಿ ಹಾಗೂ ಲಿವರ್ ಸೇರಿದಂತೆ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಐವರು ವ್ಯಕ್ತಿಗಳಿಗೆ ಹೊಸ ಜೀವನ ನೀಡಿದ ಸಾರ್ಥಕತೆ ಈ ಕುಟುಂಬಕ್ಕೆ ಸಂದಿದೆ.
ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ
ಮೃತ ಮಂಜುನಾಥ್ ಅವರಿಗೆ ನಾಲ್ಕು ವರ್ಷ ಹಾಗೂ ಒಂದು ವರ್ಷದ ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಮಂಜುನಾಥ್ ಅವರ ಅಗಲಿಕೆಯಿಂದ ಬಡ ಕುಟುಂಬ ಬೀದಿಗೆ ಬಿದ್ದಿದೆ. ಪುಟ್ಟ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ದಾನಿಗಳು ಮತ್ತು ಸಂಘ-ಸಂಸ್ಥೆಗಳು ಸಹಾಯ ಮಾಡಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
