ಚಿಕ್ಕಮಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 6,000ಕ್ಕೂ ಹೆಚ್ಚು ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಸೈನಿಕ ತರಬೇತಿ ನೀಡಲು ಹೊರಡಿಸಿರುವ ಆದೇಶಕ್ಕೆ ಬಿಜೆಪಿ ನಾಯಕ ಹಾಗೂ ಶಾಸಕ ಸಿ.ಟಿ. ರವಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಯಾವುದೇ ರಾಜ್ಯ ಸರ್ಕಾರ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಇಂತಹ ರಕ್ಷಣಾ ತರಬೇತಿ ನೀಡುವ ಅಧಿಕಾರ ಹೊಂದಿಲ್ಲ. ಈ ರೀತಿಯ ಕ್ರಮ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಧಾರ್ಮಿಕ ಆಧಾರದ ಮೇಲೆ ಭಾರತ ವಿಭಜನೆಯಾದರೂ ದೇಶದಲ್ಲಿ ಧಾರ್ಮಿಕ ಉನ್ಮಾದ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಭಾರತದಲ್ಲಿದ್ದುಕೊಂಡೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಮನೋಭಾವದ ಕೆಲವರು ಇಂತಹ ತರಬೇತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನೀಡಲಾಗುವ ಈ ತರಬೇತಿಯು ಭವಿಷ್ಯದಲ್ಲಿ ದೇಶದೊಳಗೆ ಭಯೋತ್ಪಾದನೆ ಹಾಗೂ ಅರಾಜಕತೆ ಸೃಷ್ಟಿಗೆ ಕಾರಣವಾಗುವ ಅಪಾಯವಿದೆ ಎಂಬುದು ಅವರ ವಾದವಾಗಿದೆ.
ಆದ್ದರಿಂದ ಸರ್ಕಾರವು ದೂರದೃಷ್ಟಿಯಿಂದ ಈ ವಿಚಾರವನ್ನು ಪರಿಶೀಲಿಸಬೇಕು. ಧರ್ಮದ ಆಧಾರದ ಮೇಲೆ ಸೈನಿಕ ತರಬೇತಿ ನೀಡುವ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
