Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ : ನಿರಂತರ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ಥ

ಮೂಡಿಗೆರೆ : ನಿರಂತರ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ಥ

ಮೂಡಿಗೆರೆ : ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ನಿರಂತರ ಮಳೆಗೆ ಪ್ರಮುಖ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡಿತು. ಇದಲ್ಲದೆ ಹಲವೆಡೆ ಮನೆ, ವಿದ್ಯುತ್‌ ಕಂಬ ಹಾನಿಯಾಗಿದ್ದು, ರಾಜ್ಯ ಹೆದ್ದಾರಿಯಲ್ಲೂ ನೀರು ಹರಿದಿದೆ.

ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ಹರಿದಿದೆ. ತಾಲೂಕಿನ ಹಲವೆಡೆ 25/10/15/8./ 6/ ಇಂಚು ವರೆಗೂ ಮಳೆ ಬಂದ ವರದಿ ಇದೆ.

ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ.. ದಿಡೀರ್ ಅಬ್ಬರಿಸಿ ಶುಕ್ರವಾರ ಸಂಜೆಯಿಂದ ಮತ್ತೆ ಮಳೆ ಆರಂಭವಾಗಿದ್ದು, ಶನಿವಾರ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ.

ತಾಲೂಕಿನ ಕುಂದೂರು ರಸ್ತೆ ಮೇಲೆ ಸಂಪೂರ್ಣ ಕಲ್ಲುಗಳ ರಾಶಿ ರಸ್ತೆಗೆ ಬಂದಿದ್ದು ವಾಹನ ಸವಾರರು, ಸರ್ಕಸ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ

ಮೂಡಿಗೆರೆಯ ಚಿರಾಪುಂಜಿ ಆಗೊಂಬೆ ಖ್ಯಾತಿಯ ಕೊಟ್ಟಿಗೆಹಾರ. ಹೊಸಕೆರೆ. ಬೈರಾಪುರ ಗ್ರಾಮಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲೂ ನೀರು ಹರಿದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತು. ಇದಲ್ಲದೆ ಕೆಲವೆಡೆ ಮನೆ, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಮತ್ತೆ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಿದ್ದು, ಮತ್ತಷ್ಟು ಅವಾಂತರಕ್ಕೆ ಕಾರಣವಾಗುವ ಸಂಭವವಿದೆ.

ಸಮರ್ಪಕ ಒಳ ಚರಂಡಿ ವ್ಯವಸ್ಥೆಯಲ್ಲದೆ, ಮಳೆಯ ನೀರು ರಸ್ತೆಯ ಮೇಲೆ ಹರಿದಿದೆ. ಇದರ ಪರಿಣಾಮವಾಗಿ ವಾಹನ ಸಂಚಾರರು ಪರದಾಡುವಂತಾಗಿದ್ದು, ಪಟ್ಟಣದಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ರಸ್ತೆಯಲ್ಲಿ ರಾತ್ರಿ ನೀರು ಹರಿದ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿ ಕೂಲಿ ಕಾರ್ಮಿಕರ ಹೊಟ್ಟೆಗೆ ಪೆಟ್ಟು ಬಿದ್ದಿದ್ದು, ಮನೆಗೆ ನುಗ್ಗಿದ್ದ ನೀರನ್ನು ತೆರವು ಗೊಳಿಸಲು ಹರ ಸಾಹಸ ಪಟ್ಟಿದ್ದು ಕೆಲವು ಕಾಲ ಸಮಸ್ಯೆಯಾಗಿದೆ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಎಂಬಂತೆ ವಾರ್ಷಿಕ ಬೆಳೆ ಗಳಾದ ಕಾಫಿ ಮೆಣಸು ಅಡಿಕೆ ಮಳೆ ಹೊಡೆತಕ್ಕೆ ನೆಲಕಚ್ಚಿದೆ.

ಕೆಲ ರೈತ ಕುಟುಂಬಗಳು ಬೀದಿಗೆ ಬಂದಿದ್ದು ವಿಷ ಕುಡಿಯುವುದೊಂದೇ ದಾರಿ ಎಂಬುವ ನೋವಿನ ಮಾತುಗಳನ್ನು ರೈತರು ಹೇಳುತ್ತಿದ್ದಾರೆ.

ಮಳೆ ರಭಸದಿಂದ ನಾನಾ ಅವಾಂತರಗಳಿಗೆ ಕಾರಣವಾಗಿದೆ. ಅದರಲ್ಲೂ , ಪಟ್ಟಣ ಸೇರಿದಂತೆ ಹಳ್ಳಿ ಭಾಗಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ತುಂಬಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದಂತಾಗಿದೆ.

ಮಳೆಯಿಂದಾಗಿ ಕಡಿದಾಳು ಗ್ರಾಮದ ಮುಖ್ಯ ರಸ್ತೆ ಮಳೆಯಿಂದ ಜಲಾವೃತಗೊಂಡು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

ದಾರಕಾರವಾಗಿ ಸುರಿಯುತ್ತರುವ ಮಳೆಯಿಂದಾಗಿ ಸೇತುವೆಗಳು ಅಪಾಯದಲ್ಲಿದೆ

ಗಾಳಿ ಸಹಿತ ನಿರಂತರ ಮಳೆಯ ಕಾರಣ ವಿದ್ಯುತ್‌ ಸಂಪರ್ಕಕ್ಕೆ ಹಾನಿ ಉಂಟಾಗಿದ್ದು ರಾತ್ರಿ ಇಡೀ ವಿದ್ಯುತ್ ವ್ಯತಯ ಮಾಡಲಾಗಿದೆ.

ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕಿಸುವ ಹಲವು ರಸ್ತೆಗಳು ಡಾಂಬರ್ ಕಾಣದೆ ಹೊಂಡ ಗುಂಡಿಗಳಿಂದ ಕೂಡಿದ್ದು ಮಳೆಗಾಲದಲ್ಲಿ ಸಂಚಾರ ಮಾಡುವುದೇ ಪ್ರಯಾಸವಾಗಿದೆ.

ಸಂಪರ್ಕಿಸುವ ರಸ್ತೆ ಶಿಥಿಲಾವಸ್ಥೆಗೆ ತಲುಪಿದ್ದು ಜನ ವಾಹನಗಳು ಓಡಾಡಲು ಸಾಧ್ಯವಾಗದ ಸ್ಥಿತಿಯಿದೆ. ಸಂಪರ್ಕ ಕಲ್ಪಿಸುವ ರಸ್ತೆ 30 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಪರಿಣಮಿಸಿದೆ.

ಇದರಿಂದ ಗ್ರಾಮಕ್ಕೆ ಯಾವುದೇ ವಾಹನಗಳು ಬಾಡಿಗೆಗೆ ಬರುವುದಿಲ್ಲ ಎಂದು ಕೆಲವು ಗ್ರಾಮಗಳ ಗ್ರಾಮಸ್ಥರು ನೋವನ್ನು ಹಂಚಿಕೊಂಡರು.

ಮೂಡಿಗೆರೆ ಹಾಗೂ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಕ್ರಿಯಾಯೋಜನೆ ರೂಪಿಸಿ ಸ್ಥಳೀಯ ಅಧಿಕಾರಿಗಳು ಶಾಸಕರು ಮಾಹಿತಿ ಸಲ್ಲಿಸಬೇಕು .

ಈ ರಸ್ತೆಗಳಲ್ಲಿ ಶಾಲಾ ವಾಹನಗಳು ಬೈಕ್ ಸವಾರರು ಜೀವ ಬಿಗಿಹಿಡಿದು ಸಾಗುವಂತಗಿದೆ ರಸ್ತೆಯ ಡಾಂಬರ್ ಕಿತ್ತು ಜಲ್ಲಿಕಲ್ಲು ಹೊರ ಬಂದಿವೆ.

25 ವರ್ಷಗಳ ಹಿಂದೆ ದುರಸ್ತಿ ಕಂಡ ಅದೆಷ್ಟೋ ಗ್ರಾಮೀಣ ರಸ್ತೆಗಳು ಈವರೆಗೂ ಮರಳಿ ದುರಸ್ತಿಯಾಗಿಲ್ಲ. ಕಾಲಿಗೆ ತಾಕುವ ಚೂಪಾದ ಕಲ್ಲುಗಳು ಮೈಗೆ ಸಿಡಿಯುವ ಕೆಸರು ಮಳೆಗಾಲದಲ್ಲಂತೂ ಇದು ಹೇಳ ತೀರದ ಸಮಸ್ಯೆ. ತಾಲ್ಲೂಕಿನಲ್ಲಿ ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಅಲ್ಲದೆ ಹಲವು ಭಾಗಗಳಲ್ಲಿ ರಸ್ತೆಗೆ ಧರೆ ಕುಸಿತ ಕಂಡಿವೆ

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಗಡಿ ಅಂಚಿನ ಗ್ರಾಮಗಳಲ್ಲು ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾಣದೆ ಅವ್ಯವಸ್ಥೆಯ ಆಗರವಾಗಿದೆ.
ಸುಮಾರು 125 ಮತದಾರರಿರುವ ಕುಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲಾ ಪಕ್ಷದ ಅಭ್ಯರ್ಥಿಗಳು ಹೋಗಿ ಮತ ಯಾಚಿಸಿದ ನಂತರ ಮತ್ತೆ ನಾಪತ್ತೆಯಾಗುತ್ತಾರೆ.

ಶಾಸಕಿ ನಯನ ಮೋಟಮ್ಮ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ತಾಲೂಕಿನ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆಯಲ್ಲೇ ಸಾಗಬೇಕಾಗಿದೆ.

ಡಾಂಬರು ಕಾಣದೆ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ ಗಳಿಗೆ ಮುಕ್ತಿ ಯಾವಾಗ ಎಂಬುದು ಸ್ಥಳೀಯರ ಪ್ರಶ್ನೆ ಯಾಗಿದೆ.

ಗುಂಡಿಗಳಿರುವ ರಸ್ತೆಯಲ್ಲಿ ಮಳೆಗಾಲದಲ್ಲಿ ಯಾವುದೇ ವಾಹನ ಸಂಚಾರ ಅಸಾಧ್ಯ. ಡಾಂಬರು ಇಲ್ಲಿ ಮರೀಚಿಕೆಯಾಗಿದ್ದು ಸ್ಥಳೀಯರು ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನೀಡಿದ ಅರ್ಜಿಗಳಿಗೆ ಲೆಕ್ಕವಿಲ್ಲ. ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಕೆಲವರ ಬೇಸರದ ಮಾತಾಗಿದೆ

ಕಳೆದ ವರ್ಷ ಮಳೆಯಿಂದ ಹಾಳಾದ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಒಂದು ವರ್ಷ ಕಳೆದರೂ ಅಭಿವೃದ್ಧಿಪಡಿಸದ ಕಾರಣ ಈ ವರ್ಷ ಮಳೆಗೆ ಇನ್ನಷ್ಟು ಹಾಳಾಗಿದ್ದು ರಸ್ತೆಯಲ್ಲಿ ಓಡಾಡದಂತ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಸರಿಯಾದ ನಿರ್ವಹಣೆಯಿಲ್ಲದೇ ಮಳೆಗಾಲದಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ಗ್ರಾಮಸ್ಥರು ನಡೆದುಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆಲವು ರಸ್ತೆಯಲ್ಲಿ ಚರಂಡಿ ಎಲ್ಲಿದೆ ಎಂಬುದನ್ನು ಹುಡುಕಬೇಕು. ರಸ್ತೆ ಬದಿಯ ಗಿಡದ ಕೊಂಬೆಗಳನ್ನು ಕಟ್‌ ಮಾಡದ ಕಾರಣ ಎಲ್ಲೆಡೆ ಮರದ ರೆಂಬೆಗಳು ಜೋತು ಬಿದ್ದಿವೆ. ಜಲ್ಲಿ ಮತ್ತು ಮಣ್ಣು ಹಾಕಿದ ರಸ್ತೆಯಲ್ಲಿ ನೀರು ಹರಿದು ಮಣ್ಣು ಕೊಚ್ಚಿಕೊಂಡು ಹೋಗಿದೆ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ.

ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಪಟ್ಟಣಕ್ಕೆ ಬರಲು ಹರಸಾಹಸ ಪಡಬೇಕಾಗಿದೆ. ಮನೆ ಮತ್ತು ತೋಟಕ್ಕೆ ಬೇಕಿರುವ ವಸ್ತುಗಳನ್ನು ಸಾಗಿಸುವುದೇ ಕಷ್ಟವಾಗಿದೆ.

ತುರ್ತು ಚಿಕಿತ್ಸೆ ಪಡೆಯಲು ಅನಿವಾರ್ಯವಾದರೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ತುರ್ತು ಸಂದರ್ಭದಲ್ಲಿ ಬಾಡಿಗೆ ಹೋದರೆ ಪಟ್ಟಣಕ್ಕೆ ವಾಪಸ್ ಬರುವುದೇ ಕಷ್ಟ ಎಂದು ಆಟೊ ಚಾಲಕರು ಹೇಳುತ್ತಾರೆ.

ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡಿನಲ್ಲಿ ಪ್ರತಿ ವರ್ಷ 150ರಿಂದ 500 ಇಂಚು ಮಳೆಯಾಗುತ್ತಿದ್ದು ರಸ್ತೆಗಳು ಹಾಳಾಗುತ್ತಿದೆ

ಲೋಕೋಪಯೋಗಿ ಜಿಲ್ಲಾ ಪಂಚಾಯಿತಿ ರಸ್ತೆ ಪಕ್ಕದ ಚರಂಡಿ ತೆರೆದು ಮಳೆ ನೀರು ಹೋಗಲು ಅವಕಾಶ ಕೊಟ್ಟರೆ ರಸ್ತೆಗೆ ಆಗುವ ಹಾನಿ ತಡೆಯಬಹುದು.

ಮೂಡಿಗೆರೆ ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಗುಂಡಿ ಬಿದ್ದಿದ್ದು ಜನ ನಿತ್ಯವೂ ಹೈರಾಣಾಗುವಂತಾಗಿದೆ. ಬಾಳೂರು ಹೋಬಳಿ ಗಬ್ಗಲ್ ಸಾರಗೋಡು ರಸ್ತೆ ಸಾರಗೋಡು – ಚಂಡಗೋಡು ಚಿಕ್ಕಳ್ಳ ರಸ್ತೆ ಮೂಡಿಗೆರೆ – ತತ್ಕೊಳ ರಸ್ತೆ ಹೊಯ್ಸಳಲು ರಸ್ತೆ ಬಸ್ಕಲ್- ನಂದೀಪುರ ರಸ್ತೆ ಸಬ್ಬೇನಹಳ್ಳಿ – ಬಾಳೆಹೊನ್ನೂರು ರಸ್ತೆ ಸೇರಿದಂತೆ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು ನಿತ್ಯ ಜನ ಈ ರಸ್ತೆಗಳಲ್ಲಿ ಓಡಾಡಲು ಸಂಕಷ್ಟ ಎದುರಿಸುವಂತಾಗಿದೆ.

ಮೂಡಿಗೆರೆಯಿಂದ ಸಕಲೇಶಪುರಕ್ಕೆ‌‌ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯು ಬೆಟ್ಟದಮನೆ- ಕಿರುಗುಂದ – ಹಾನುಬಾಳು ಸೇರಿದಂತೆ ವಿವಿಧ ಭಾಗಗಳಲ್ಲಿ ಹಾನಿಯಾಗಿದ್ದು ಪ್ರತಿ‌ದಿನ‌ ಸಂಚರಿಸುವ ನೂರಾರು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ –173ರ ಮೂಡಿಗೆರೆ– ಚಿಕ್ಕಮಗಳೂರು ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಆ ಗುಂಡಿ ರಸ್ತೆಯ ಗ್ರಾಮಗಳಿಗೆ ತೆರಳಲು ಬಾಡಿಗೆ ವಾಹನಗಳು ‌ಹಿಂದೇಟು ಹಾಕುವುದರಿಂದ ದುಬಾರಿ‌ ಬಾಡಿಗೆ ನೀಡಿ ತೆರಳಬೇಕಾಗಿದೆ.

ಕೃಷಿಕರು ಗೊಬ್ಬರ ಬೆಳೆ ಉತ್ಪನ್ನಗಳನ್ನು ಸಾಗಿಸಲು‌ ಕೂಡ ರೈತರು ನಲುಗುತ್ತಿದ್ದಾರೆ. ಪ್ರತಿನಿತ್ಯ ಓಡಾಡುವ ವಿದ್ಯಾರ್ಥಿಗಳು ಮಹಿಳೆಯರಿಗೂ ಕೂಡ ಗುಂಡಿ‌ ರಸ್ತೆಯ ಪ್ರಯಾಣ ತ್ರಾಸದಾಯಕವಾಗಿದೆ.

ಗುಂಡಿ ರಸ್ತೆಯ ಬಗ್ಗೆ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳಿಗೆ‌ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ರಸ್ತೆ ಮೇಲೆ ಮಳೆ ನೀರು ನಿಲ್ಲುವುದರಿಂದ ಗುಂಡಿಯ ಅರಿವಿಲ್ಲದೇ ಅಪಘಾತಗಳು ಸಹ ಸಂಭವಿಸುತ್ತಿವೆ. ಗುಂಡಿ ರಸ್ತೆಗಳು ವಾಹನ ಸವಾರರಿಗೆ ಮಾತ್ರವಲ್ಲದೇ ಪಾದಚಾರಿಗಳಿಗೂ ಅಡ್ಡಿಯಾಗುತ್ತಿವೆ.

ಹೊಸದಾಗಿ ನಿರ್ಮಿಸಿದ ರಸ್ತೆಗಳು ಬಹುಬೇಗ ಹಾನಿಯಾಗುತ್ತಿದ್ದು ಗುಣಮಟ್ಟದ ಕೊರತೆ ಹಾಗೂ ರಸ್ತೆ ಬದಿ ಚರಂಡಿ ವ್ಯವಸ್ಥೆ‌ ಇಲ್ಲದಿರುವುದು ರಸ್ತೆ ಹಾನಿಯಾಗಲು ಕಾರಣ ಎನ್ನುತ್ತಾರೆ ಸಾರ್ವಜನಿಕರು.

ಬೇಸಿಗೆಯಲ್ಲಿ ಸಮರ್ಪಕವಾಗಿ ರಸ್ತೆಯನ್ನು ನಿರ್ವಹಿಸಿದರೆ ಮಳೆಗಾಲದಲ್ಲಿ ಹೆಚ್ಚು ಹಾನಿಯಾಗದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು.

ಕೆಲವು ಗ್ರಾಮೀಣ ರಸ್ತೆಗಳಿಗೆ ಅನುದಾನ‌ ಬಂದಿದ್ದು ಬಹಳಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.ಆದರೆ ಉಳಿದ ಆನೇಕ ರಸ್ತೆಗಳನ್ನು ಬೇಗ ದುರಸ್ತಿ ಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ

ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ಧಾರೆ

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!