ಮೂಡಿಗೆರೆ: ಕಸ ಎತ್ತುವುದು ಸಣ್ಣ ಕೆಲಸವೆಂದು ಯಾರೂ ಭಾವಿಸಬಾರದು. ಇದು ಸಮಾಜದ ದೊಡ್ಡ ಜವಾಬ್ದಾರಿ. ನಮ್ಮ ಊರು ಹಾಗೂ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಸದಾನಂದ ಬಂಗೇರಾ ಹೇಳಿದರು.
ಬುಧವಾರ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಜನ್ನಾಪುರದಿಂದ ಕೊಟ್ಟಿಗೆಹಾರವರೆಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛತೆ ಇಲ್ಲದಿದ್ದರೆ ಪರಿಸರ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಸ್ವಚ್ಛತೆ ಕಾಪಾಡುವುದು ಕೇವಲ ಸರ್ಕಾರದ ಕೆಲಸವಲ್ಲ. ಮನೆ, ರಸ್ತೆ, ಶಾಲೆ, ದೇವಾಲಯ, ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕಾಪಾಡುವುದು ನಮ್ಮ ನೈತಿಕ ಹೊಣೆಗಾರಿಕೆ ಎಂದು ಹೇಳಿದರು.

ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಅಗತ್ಯವಿದೆ. ಇಂದು ವಿವಿಧ ಸಂಘಟನೆಗಳ ಸಹಕಾರದಿಂದ ಗ್ಲೌವ್ಸ್ ಹಾಗೂ ಚೀಲಗಳನ್ನು ಹಿಡಿದು ಕಸ ಎತ್ತುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗಿದೆ. ಇನ್ನು ಮುಂದೆ ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ, ಇತರರಲ್ಲೂ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲೂಕು ಯೋಜನಾಧಿಕಾರಿ ಸುಧೀರ್ ಜೈನ್, ಶೌರ್ಯ ವಿಪತ್ತಿನ ತಾಲೂಕು ಮಾಸ್ಟರ್ ಪ್ರವೀಣ್ ಪೂಜಾರಿ, ಕ್ಯಾಪ್ಟನ್ ಕೆ.ಎಲ್. ರವಿ, ತೋಟಗಾರಿಕೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕರಾದ ನವೀನ್ ಮತ್ತು ಸಂಕಲ್ಪ, ಹಾಗೂ ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು , ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಕರವೇ ಅಧ್ಯಕ್ಷ ವಿನೋಧ್ ಕುಮಾರ್, ಸಂಜಯ್ ಕೊಟ್ಟಿಗೆಹಾರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಶೌರ್ಯ ವಿಪತ್ತಿನ ಸದಸ್ಯರು ಸೇರಿ 500ಕ್ಕೂ ಅಧಿಕ ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತೆ ಕಡೆಗೆ ತಲೆ ಹಾಕದ ಗ್ರಾ.ಪಂ.ಗಳ ವಿರುದ್ಧ ಅಸಮಾಧಾನ
ಸ್ವಚ್ಛತೆ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸುತ್ತಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿಗಳು ಬಿದ್ದಿರುವುದು ವಿಷಾದಕರವಾಗಿದೆ. ಜನ್ನಾಪುರದಿಂದ ಕೊಟ್ಟಿಗೆಹಾರ ವ್ಯಾಪ್ತಿಯ ತರುವೆ ಮತ್ತು ಬೆಟ್ಟಗೆರೆ ಗ್ರಾಮ ಪಂಚಾಯಿತಿಗಳ ಕಸದ ವಾಹನ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆದರೆ ಬಣಕಲ್, ಬಿದರಹಳ್ಳಿ ಹಾಗೂ ಹಳೆಮೂಡಿಗೆರೆ ಗ್ರಾಮ ಪಂಚಾಯಿತಿಗಳಿಂದ ಕೇವಲ ಕಸದ ವಾಹನ ಕಳುಹಿಸಲಾಗಿದ್ದು, ಸಿಬ್ಬಂದಿ ಭಾಗವಹಿಸದಿರುವುದು ಅಸಮಾಧಾನಕ್ಕೆ ಕಾರಣವಾಯಿತು. ಇನ್ನು ಪಲ್ಗುಣಿ ಗ್ರಾಮ ಪಂಚಾಯಿತಿಯಿಂದ ವಾಹನವಾಗಲಿ, ಸಿಬ್ಬಂದಿಯಾಗಲಿ ಭಾಗವಹಿಸದಿರುವುದರಿಂದ ಸಂಘ ಸಂಸ್ಥೆಗಳ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
