ಮೂಡಿಗೆರೆ: ತಾಲೂಕಿನ ಬಿದರಹಳ್ಳಿ ಗ್ರಾಮದ ಸಮೀಪ ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವ ಸರಕಾರಿ ರಸ್ತೆಯನ್ನು ವ್ಯಕ್ತಿಯೋರ್ವರು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿದ್ದ ಬೇಲಿಯನ್ನು ಬುಧವಾರ ಕಂದಾಯ ಅಧಿಕಾರಿಗಳು ತೆರವುಗೊಳಿಸಿದರು.
ಬಿದರಹಳ್ಳಿ ಗ್ರಾಮದ ಸರ್ವೆ ನಂಬರ್101ರಲ್ಲಿರುವ ಸರಕಾರಿ ರಸ್ತೆ ಕೆಂಜಿಗೆಯಿಂದ ಬಿದರಹಳ್ಳಿ, ಲೋಕವಳ್ಳಿ ಮತ್ತು ಲೋಕವಳ್ಳಿ ಎಸ್ಟೇಟ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವೇಣುಗೋಪಾಲ ಎಂಬುವರು ಒತ್ತುವರಿ ಮಾಡಿ, ಅಕ್ರಮವಾಗಿ ಬೇಲಿ ನಿರ್ಮಿಸಿದ್ದರು. ಇದರಿಂದ ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ ಪಂಪ್‌ಹೌಸ್‌ಗೆ ತೆರಳಲು, ಅನೇಕ ಹಿಡಿವಳಿ ಜಮೀನಿಗೆ ತೆರಳಲು, ಅಕ್ಕಪಕ್ಕದ ಗ್ರಾಮದ ಜನರು ಹಾಗೂ ಜಾನುವಾರುಗಳು ತಿರುಗಾಡಲು ತೊಂದರೆ ಉಂಟಾಗಿತ್ತು.
ಈ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಯಾದ ಬಿ.ಡಿ.ರಾಧಕೃಷ್ಣ, ಬಿ.ಡಿ.ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಕಳೆದ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೂಡಿಗೆರೆ ತಹಸೀಲ್ದಾರರಿಗೆ ಸೂಚಿಸಲಾಗಿತ್ತು. ಅದರಂತೆ ತಹಸೀಲ್ದಾರ್ ಎಸ್.ಅಶ್ವಿನಿ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಖಲೆಗಳ ಪರಿಶೀಲನೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಬೇಲಿ ನಿರ್ಮಿಸಿರುವುದು ದೃಢಪಟ್ಟಿದ್ದ ಹಿನ್ನಲೆಯಲ್ಲಿ ಬುಧವಾರ ಅಕ್ರಮ ಬೇಲಿ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದರು. ದೂರಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸಿದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಕಾರ್ಯಕ್ಕೆ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ತೆರವು ಕಾರ್ಯಚರಣೆಯಲ್ಲಿ ಆರ್‌ಐ ಚಂದ್ರಶೇಖರ್, ವಿಎ ಕವನ್, ಬಿದರಹಳ್ಳಿ ಪಿಡಿಒ ದುಗ್ಗಮ್ಮ, ಗ್ರಾಮ ಸಹಾಯಕ ಕೆಂಚಯ್ಯ, ಗ್ರಾ.ಪಂ. ವಾಟರ್‌ಮ್ಯಾನ್ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ ಭಾಗವಹಿಸಿದ್ದರು.
