ಚಿಕ್ಕಮಗಳೂರು: ಕಾಫಿನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ವರ್ಷ ಪೂರ್ತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ಗಿರಿ ಪ್ರದೇಶಗಳ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಳೆದ ಮೂರು – ನಾಲ್ಕು ದಿನಗಳಿಂದ ನಿರಂತರ ಜಿಟಿ ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿ ಹಾಗೂ ಮುಳ್ಳಯ್ಯನಗಿರಿ ಪ್ರದೇಶಗಳು ಮೋಡಗಳ ಹೊದಿಕೆಯಲ್ಲಿ ಕಂಗೊಳಿಸುತ್ತಿವೆ.
ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರದ ಶಿಖರವಾಗಿದ್ದು, ಮಳೆಗಾಲದಲ್ಲಿ ಇಲ್ಲಿನ ದೃಶ್ಯ ವೈಭವ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಬೆಟ್ಟದ ತುದಿಯನ್ನು ತಲುಪುತ್ತಿದ್ದಂತೆಯೇ ದಟ್ಟ ಮಂಜು ಮತ್ತು ಬೆಳ್ಳಿ ಮೋಡಗಳು ಸುತ್ತುವರಿದು, ಮೋಡಗಳ ಮಧ್ಯೆಯೇ ಸಂಚರಿಸುತ್ತಿರುವ ಅನುಭವವನ್ನು ನೀಡುತ್ತವೆ. ಕೆಲವೊಮ್ಮೆ ಪಕ್ಕದಲ್ಲಿರುವ ವ್ಯಕ್ತಿಯೇ ಕಾಣದಷ್ಟು ಮಂಜು ಆವರಿಸುವ ದೃಶ್ಯಗಳು ಪ್ರವಾಸಿಗರಲ್ಲಿ ವಿಭಿನ್ನ ಅನುಭವ ಮೂಡಿಸುತ್ತಿವೆ.
ಆದರೆ ಮಂಜಿನ ವಾತಾವರಣದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಗಳು ಉತ್ತಮ ವಾಗಿದ್ದರೂ ಕಿರಿದಾಗಿದ್ದು, ದಟ್ಟ ಮಂಜಿನಿಂದ ಎದುರಿನ ವಾಹನಗಳು ಕಾಣಿಸದೇ ಅಪಘಾತದ ಸಂಭವ ಹೆಚ್ಚಿರುತ್ತದೆ. ಹೀಗಾಗಿ ನಿಧಾನಗತಿಯಲ್ಲಿ ಹಾಗೂ ಅನುಭವಿ ಚಾಲಕರಿಂದ ವಾಹನ ಚಲಾಯಿಸುವುದು ಸುರಕ್ಷಿತವಾಗಿದೆ.
ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆನ್‌ಲೈನ್ ಬುಕ್ಕಿಂಗ್ ಕಡ್ಡಾಯವಾಗಿದೆ. ಚಿಕ್ಕಮಗಳೂರು ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಸ್ಲಾಟ್ ಕಾಯ್ದಿರಿಸಿ ಪ್ರವಾಸ ಕೈಗೊಳ್ಳಬಹುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸರ್ಕಾರಿ ಬಸ್ ಸೌಲಭ್ಯವಿದ್ದು, ಸ್ಥಳೀಯವಾಗಿ ಟ್ಯಾಕ್ಸಿ, ಜೀಪು ಹಾಗೂ ವಸತಿಗಾಗಿ ಹೋಂಸ್ಟೇ, ರೆಸಾರ್ಟ್ ವ್ಯವಸ್ಥೆಗಳೂ ಲಭ್ಯವಿವೆ.
ಒಟ್ಟಿನಲ್ಲಿ ಮುಳ್ಳಯ್ಯನಗಿರಿ, ಮಳೆಗಾಲದಲ್ಲಿ ಮೋಡಗಳ ಲೋಕವಾಗಿ ಪರಿವರ್ತನೆಗೊಂಡು ಚಿಕ್ಕಮಗಳೂರು ಪ್ರವಾಸೋದ್ಯಮದ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಮತ್ತೊಮ್ಮೆ ಮಿಂಚುತ್ತಿದ್ದು, ನಿತ್ಯ ಈ ಅದ್ಭುತ ಲೋಕ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವುದು ಅತ್ಯಂತ ವಿಶೇಷವಾಗಿದೆ.
