ಕೊಪ್ಪ: ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮಲೆನಾಡಿಗರು ಆತಂಕದಲ್ಲಿ ಬದುಕುವಂತಾಗಿದೆ. ಈಗಾಗಲೇ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈಗ ಕಾಡುಕೋಣಗಳ ಭಯಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ.
ಇದೀಗ ಕೊಪ್ಪ ಎಸ್ಟೇಟ್ ಬಳಿ ಕಾರ್ಯಾಚರಣೆ ಆರಂಭವಾಗಿದ್ದು, 6 ಪಶು ವೈದ್ಯಾಧಿಕಾರಿಗಳ ತಂಡ ಮತ್ತು 2 ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಈ ದಿಟ್ಟ ಹೆಜ್ಜೆಯಿಂದ ಮಲೆನಾಡ ರೈತರು ಮತ್ತು ಸಾರ್ವಜನಿಕರು ಆತಂಕಮುಕ್ತರಾಗುವ ಕಾಲ ಬಂದಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಮಲೆನಾಡು ಭಾಗದಲ್ಲಿ ಕಾಡುಕೋಣಗಳು ನಿರಂತರವಾಗಿ ಬೆಳೆ ನಾಶಪಡಿಸುವುದು ಮಾತ್ರವಲ್ಲದೇ, ಕೃಷಿಕರು ಮತ್ತು ಸಾರ್ವಜನಿಕರ ಮೇಲೂ ದಾಳಿ ಮಾಡುತ್ತಿದ್ದವು. ಇದೀಗ, ಸರ್ಕಾರ ಮತ್ತು ಅರಣ್ಯ ಇಲಾಖೆ ಅಪಾಯಕಾರಿ ಕಾಡುಕೋಣಗಳನ್ನ ಸ್ಥಳಾಂತರಿಸಲು ಮುಂದಾಗಿದೆ. ಅಪಾಯಕಾರಿ ಎಂದು ಗುರುತಿಸಲಾದ 3 ಕಾಡುಕೋಣಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅಧಿಕೃತವಾಗಿ ಆದೇಶ ಹೊರಡಿಸಿದ್ದು ಈ ಕಾರ್ಯಾಚರಣೆ ದಕ್ಷಿಣ ಭಾರತದಲ್ಲೇ ಮೊದಲಾಗಿದೆ.
ಈ ಕಾರ್ಯಾಚರಣೆ ಯಶಸ್ಸಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ತರಬೇತಿ ಪಡೆದಿದ್ದಾರೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕಾಡುಕೋಣಗಳನ್ನು ಸೆರೆಹಿಡಿದು ಸ್ಥಳಾಂತರಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ.
