ಹಾಸನ : ಬೇಲೂರು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ–ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಸರ್ಕಾರ ಕೊನೆಗೂ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದಿನಿಂದಲೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.
ಕಾರ್ಯಾಚರಣೆಗೆ ಸಕಲ ಸಿದ್ಧತೆ!
ಸರ್ಕಾರದ ಆದೇಶದ ಬೆನ್ನಲ್ಲೇ ಅರಣ್ಯ ಇಲಾಖೆ ಇಂದಿನಿಂದ ಕಾರ್ಯಾಚರಣೆ ನಡೆಸಲಿದೆ. ಮತ್ತಿಗೋಡು ಶಿಬಿರದಿಂದ ಅಶೋಕ, ಶ್ರೀಕಂಠ ಹಾಗೂ ರೋಹಿತ್ ಎಂಬ ಸಾಕಾನೆಗಳು ಬೇಲೂರು ತಾಲೂಕಿನ ಬಿಕ್ಕೋಡು ಕ್ಯಾಂಪ್‌ಗೆ ಬಂದಿಳಿದಿವೆ. ಇದರ ಜೊತೆಗೆ ಭೀಮನಕಟ್ಟೆ ಮತ್ತು ದುಬಾರೆ ಶಿಬಿರಗಳಿಂದ ಪ್ರಶಾಂತ, ಮಾಣಿಕ್ಯ ಹಾಗೂ ಅಯ್ಯಪ್ಪ ಕುಮ್ಕಿ ಆನೆಗಳು ಸಹ ಕಾರ್ಯಾಚರಣೆಗೆ ಕೈಜೋಡಿಸಲಿವೆ. ಒಟ್ಟು ಆರು ಸಾಕಾನೆಗಳ ನೇತೃತ್ವದಲ್ಲಿ ಹತ್ತು ಪುಂಡಾನೆಗಳ ಸೆರೆ ಹಾಗೂ 56 ಆನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆಯಲಿದೆ.
ಕಾಡಾನೆ ದಾಳಿಗೆ ಕಳೆದ ಶನಿವಾರ ಚೌಡನಹಳ್ಳಿಯಲ್ಲಿ ಜಯಮ್ಮ ಬಲಿಯಾಗಿದ್ದರು. ಸೋಮವಾರ ನಾಗೇನಹಳ್ಳಿ ಗ್ರಾಮದಲ್ಲಿ ಹಫೀಜುರ್ ರೆಹಮಾನ್ ಸಾವನ್ನಪ್ಪಿದ್ದಾರೆ. ಇದರಿಂದ ಸಿಡಿದೆದ್ದ ಗ್ರಾಮಸ್ಥರು ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಸರ್ಕಾರದ ಆದೇಶ ಪ್ರತಿ ತೋರಿಸಿ ಜನರ ಮನವೊಲಿಸಿದರು. ಮೊದಲು ಹತ್ತು ಪುಂಡಾನೆಗಳ ಸೆರೆಗೆ ಮಾತ್ರ ಆದೇಶವಾಗಿತ್ತು. ಆದರೆ, ಸಚಿವರ ಒತ್ತಡದ ಹಿನ್ನೆಲೆಯಲ್ಲಿ ಬೇಲೂರು ಭಾಗದಲ್ಲಿರುವ ಎಲ್ಲಾ 56 ಕಾಡಾನೆಗಳನ್ನು ಒಂದು ತಿಂಗಳೊಳಗೆ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಸರ್ಕಾರ ಅಂತಿಮ ಆದೇಶ ಹೊರಡಿಸಿದೆ.
